ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯಿಂದ ಇಂದು ಮುಂಬೈಗೆ ಮರಳುತ್ತಿದ್ದು, ಇದರ ನಡುವೆಯೇ ಮುಂಬೈನಲ್ಲಿರುವ ಅವರ ಕಚೇರಿಯನ್ನು ನೆಲಸಮ ಮಾಡಲಾಗುತ್ತಿದೆ.
ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ತೊಡೆತಟ್ಟಿದ್ದಾರೆ. ಇಂದು ಬೆಳಗ್ಗೆಯಷ್ಟೇ ಟ್ವೀಟ್ ಮಾಡಿರುವ ಕಂಗನಾ, ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಗೂಂಡಾಗಳು ಮುಂಬೈನಲ್ಲಿರುವ ನನ್ನ ಕಚೇರಿಯನ್ನು ಅಕ್ರಮವಾಗಿ ನೆಲಸಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸೋಮವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ, ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್ ಮಾಡಿದ್ದರು. ಅಲ್ಲದೆ, ಪರಿಶೀಲನೆ ಬಳಿಕ 14 ನಿಯಮ ಉಲ್ಲಂಘನೆಗಳ ಪಟ್ಟಿ ಸಹ ಮಾಡಿದ್ದರು. ನೆಲಸಮ ಮಾಡುವುದಾಗಿಯೂ ನೋಟಿಸ್ ಸಹ ಹೊರಡಿಸಿದ್ದರು. ಅದರಂತೆ ಅವರ ಕಚೇರಿಯನ್ನು ಇಂದು ಮಹಾ ಸರ್ಕಾರ ಹೊಡೆದುರುಳಿಸುತ್ತಿದೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಟ್ವಿಟರ್ ಅಕೌಂಟ್ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮುಂಬೈ ಆಫೀಸ್ ತೋರಿಸಿರುವ ಅವರು, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದರು.
‘ಇದು ನನ್ನ ‘ಮಣಿಕರ್ಣಿಕಾ’ ಆಫೀಸ್. ಈ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದರು. (ಏಜೆನ್ಸೀಸ್)