ಸಿನಿವಾಣಿ

ಫ್ಯಾಂಟಮ್​ನಲ್ಲಿ ಶ್ರದ್ಧಾ ಇಲ್ಲ; ಸುದೀಪ್​ಗೆ ಜತೆಯಾಗಿ ಮುಂಬೈ ನಾಯಕಿ

madikerimailmanju

ಬೆಂಗಳೂರು: ಸುದೀಪ್ ಅಭಿನಯದ ‘ಫ್ಯಾಂಟಮ್ ಚಿತ್ರದ ಎರಡು ಹಂತದ ಚಿತ್ರೀಕರಣ ಇದೀಗ ಮುಗಿದಿದ್ದು, ಡಿಸೆಂಬರ್ 7ರಿಂದ ಕೇರಳದಲ್ಲಿ ಮೂರನೆಯ ಹಾಗೂ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ಈ ಮಧ್ಯೆ, ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿಲ್ಲ ಎಂಬ ಸುದ್ದಿಯೊಂದು ಹೊರಬಿದ್ದಿದೆ.

‘ಫ್ಯಾಂಟಮ್ ಚಿತ್ರದ ಘೋಷಣೆ ಆದಾಗಿನಿಂದ, ಸುದೀಪ್​ಗೆ ನಾಯಕಿಯಾಗಿ ಶ್ರದ್ಧಾ ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಲೇ ಇದೆ. ಹಾಗೆ ನೋಡಿದರೆ, ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಾರೆ ಎಂದು ಚಿತ್ರತಂಡದವರು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದು, ಚಿತ್ರತಂಡದವರೇ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ, ಈಗಿನ ಸುದ್ದಿಯ ಪ್ರಕಾರ, ಶ್ರದ್ಧಾ ಚಿತ್ರದಲ್ಲಿ ನಟಿಸುತ್ತಿಲ್ಲ ಮತ್ತು ಅವರ ಬದಲು ಮುಂಬೈನಿಂದ ಹೊಸ ನಾಯಕಿಯನ್ನು ಕರೆದುಕೊಂಡು ಬರಲಾಗಿದೆಯಂತೆ. ಆದರೆ, ಆಕೆ ಯಾರು ಎಂಬುದನ್ನು ಮಾತ್ರ ಚಿತ್ರತಂಡ ಸದ್ಯಕ್ಕೆ ಗೌಪ್ಯವಾಗಿ ಇಟ್ಟಿದೆ. ನಾಯಕಿಯ ಹೆಸರು ಮತ್ತು ಪಾತ್ರದ ಬಗ್ಗೆ ಹೇಳಿದರೆ, ಚಿತ್ರದ ರಹಸ್ಯವನ್ನು ಬಿಟ್ಟುಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಹೆಸರನ್ನು ಗೌಪ್ಯವಾಗಿಡಲಾಗಿದೆಯಂತೆ. ಅಂದಹಾಗೆ, ‘ಫ್ಯಾಂಟಮ್ ಚಿತ್ರಕ್ಕೆ ಕೇರಳದಲ್ಲಿ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ನಟಿಸುತ್ತಿರುವ ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಜಾಕ್ ಮಂಜು ನಿರ್ವಿುಸುತ್ತಿದ್ದಾರೆ.