ಸಿನಿವಾಣಿ

ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಜಕೀಯ ಗಣ್ಯರು; ದಿಗ್ಭ್ರಮೆಯಾಗಿದೆ ಎಂದ್ರು ಸಿಎಂ ಯಡಿಯೂರಪ್ಪ

ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಸಾವು ಇಡೀ ನಾಡಿನ ಜನತೆಗೆ ಶಾಕ್​ ಉಂಟುಮಾಡಿದೆ. ಸ್ಯಾಂಡಲ್​​ವುಡ್​ ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ. ಹಾಗೇ ರಾಜಕೀಯ ಮುಖಂಡರೂ ಕೂಡ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕನ್ನಡದ ಖ್ಯಾತ ಕಲಾವಿದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರಿಗೆ ಬರೀ 39 ವರ್ಷ. ಅಕಾಲಿಕವಾಗಿ ವಿಧಿವಶರಾಗಿರುವುದು ದಿಗ್ಭ್ರಮೆ ಮೂಡಿಸಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ, ಅಪಾರ ಅಭಿಮಾನಿ ವರ್ಗಕ್ಕೆ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಸಾವಿನ ಸುದ್ದಿ ನೋವುಂಟು ಮಾಡಿದೆ. ಇನ್ನಷ್ಟು ಕಾಲ ನಟಿಸುತ್ತ, ಎಲ್ಲರನ್ನೂ ರಂಜಿಸುತ್ತ ನಮ್ಮ ನಡುವೆಯೇ ಇರಬೇಕಿತ್ತು ಈ ಹುಡುಗ. ಅವರ ದುಃಖತಪ್ತ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ.

ಇನ್ನು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಟ್ವಿಟರ್​ನಲ್ಲಿ ನೋವು ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ಹಾಗೂ ನಾಡಿನ ಜನತೆಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ಬರೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಯವರು ಟ್ವೀಟ್​ ಮಾಡಿ, ಪ್ರಖ್ಯಾತ ಕಲಾ ಕುಟುಂಬದಿಂದ ಬಂದಿದ್ದ ಚಿರಂಜೀವಿ ಸರ್ಜಾ ಕುಟುಂಬ, ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದ ಸುಂದರ್ ರಾಜ್ ಕುಟುಂಬದೊಂದಿಗೆ ಬೆರೆತಿತ್ತು. ಹಾಲು ಜೇನಿನಂತೆ ಕೂಡಿದ್ದ ಈ ಕುಟುಂಬಕ್ಕೆ ಚಿರಂಜೀವಿ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದಿದ್ದಾರೆ.

ವಿಧಾನ ಪರಿಷತ್​ ಸದಸ್ಯ ಟಿ.ಎ.ಶರವಣ ಅವರೂ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಭಿಮಾನಿಗಳಿಗೆ ಹಾಗೂ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.