ಸಿನಿವಾಣಿ

MOOKA JEEVA FILM REVIEW: ಮೂಕ ಜೀವಿಯ ಮೂಕವೇದನೆ

ಚಿತ್ರ: ಮೂಕ ಜೀವ

ನಿರ್ದೇಶನ: ಶ್ರೀನಾಥ್ ವಸಿಷ್ಠ

ನಿರ್ಮಾಣ: ಎವಿಎಂ ಎಂಟರ್‌ಟೈನರ್ಸ್

ತಾರಾಗಣ: ಕಾರ್ತಿಕ್ ಮಹೇಶ್, ಹರ್ಷ ವೆಂಕಟೇಶ್, ಅಪೂರ್ವಶ್ರೀ, ಮೇಘಶ್ರೀ, ರಮೇಶ್ ಪಂಡಿತ್ ಮತ್ತಿತರರು

ಶಿವ ಸ್ಥಾವರಮಠ

ನಮ್ಮ ಮಧ್ಯೆ ಇರುವ ಕೆಲವರು ತಮ್ಮ ಅಂಗವೈಕಲ್ಯ ಮೀರಿ ಸಾಧನೆ ಮಾಡಿರುವ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ, ಓದಿರುತ್ತೇವೆ. ಅಂತಹದ್ದೇ ಒಬ್ಬ ಮಾತು ಬಾರದ, ಕಿವಿ ಕೇಳದ ವ್ಯಕ್ತಿಯ ಬದುಕನ್ನು ‘ಮೂಕ ಜೀವ’ ಮೂಲಕ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಶ್ರೀನಾಥ್ ವಸಿಷ್ಠ.

ಒಂದು ಹಳ್ಳಿಯಿಂದ ಕಥೆ ಆರಂಭವಾಗುತ್ತದೆ. ಶ್ರೀಕಂಠ (ಹರ್ಷ ವೆಂಕಟೇಶ್) ಮಾತು ಬಾರದ, ಕಿವಿ ಕೇಳದ ಹುಡುಗ. ಸ್ವಲ್ಪ ಮಂದನಾದರೂ, ಚಿತ್ರಕಲೆಯಲ್ಲಿ ಪರಿಣಿತ. ಆದರೆ, ಊರಿನಲ್ಲಿ ನಡೆಯುವ ಕೆಲ ಘಟನೆಗಳಿಗೆ ಈತನೇ ಕಾರಣ ಎಂದು ಬಲಿಪಶು ಮಾಡಲಾಗುತ್ತದೆ. ಅದೇ ಸಮಯದಲ್ಲಿ ಅನಾರೋಗ್ಯದಿಂದ ತಾಯಿ ಸಾಕವ್ವ (ಅಪೂರ್ವ) ಮರಣ ಹೊಂದುತ್ತಾಳೆ. ಕೊನೆಗೆ ಕುಟುಂಬದಿಂದ ದೂರವಾಗಿರುವ ಅಕ್ಕನನ್ನು ಸೇರಲು ಶ್ರೀಕಂಠ, ನಗರಕ್ಕೆ ಬರುತ್ತಾನೆ. ಆಗ ‘ಮೂಕ ಜೀವ’ದ ಕಥೆ ತೆರೆದುಕೊಳ್ಳುತ್ತದೆ.

ಸಾಹಿತಿ ಜೆ.ಎಂ.ಪ್ರಹ್ಲಾದ್ ಅವರ ‘ಮೂಕ ಜೀವ’ ಕಾದಂಬರಿಯನ್ನೇ ಶ್ರೀನಾಥ್ ವಶಿಷ್ಠ ತುಂಬಾ ಭಾವುಕವಾಗಿ ನಿರೂಪಿಸಿದ್ದಾರೆ. ಅಮ್ಮ-ಮಗನ ಪ್ರೀತಿ, ಅಕ್ಕ-ತಮ್ಮನ ವಾತ್ಸಲ್ಯವನ್ನು ಗಾಢವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಕಥೆಯು ಸ್ವಲ್ಪ ಲೆಂಥಿಯಾಯಿತು ಎನಿಸುತ್ತದೆ. ಹಿನ್ನೆಲೆ ಸಂಗೀತ, ಸಂಭಾಷಣೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಚಿತ್ರದ ಮೇಲೆ ಕಿರುತೆರೆಯ ಛಾಯೆ ಕಾಣಿಸುತ್ತದೆ. ಅದಕ್ಕೆ ಶ್ರೀನಾಥ್ ವಸಿಷ್ಠ ಅವರ ಹಲವು ವರ್ಷಗಳ ಕಿರುತೆರೆ ಅನುಭವ ಕಾರಣವಿರಬಹುದು. ಮೊದಲರ್ಧದಲ್ಲಿ ಹಳ್ಳಿ, ದ್ವಿತೀಯಾರ್ಧ ನಗರದಲ್ಲಿ ಒಂದೇ ಹಾದಿಯಲ್ಲಿ ಕಥೆ ಸಾಗುತ್ತದೆ. ಭಾವುಕ ದೃಶ್ಯಗಳನ್ನು ಹೊರತುಪಡಿಸಿ, ಬೇರೆ ಯಾವ ಡ್ರಾಮಾವನ್ನು ಸೃಷ್ಟಿಸದೆ ನಿರ್ದೇಶಕರು ನೇರವಾಗಿ ಕಥೆ ಹೇಳಿ ಮುಗಿಸಿದ್ದಾರೆ.

ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಹರ್ಷ ವೆಂಕಟೇಶ್ ಅಭಿನಯದಲ್ಲಿ ಮಾಗಬೇಕಿದೆ. ಕೆಲವು ದೃಶ್ಯಗಳಲ್ಲಿ ಗಮನ ಸೆಳೆಯುವ ಅವರು, ಕೆಲವೆಡೆ ಪಾತ್ರಕ್ಕೆ ಇನ್ನಷ್ಟು ಜೀವ ತುಂಬುವ ಅವಕಾಶ ಇತ್ತು. ಕಾರ್ತಿಕ್ ಮಹೇಶ್, ಅಪೂರ್ವ ಶ್ರೀ, ಮೇಘಶ್ರೀ ಗೌಡ ಪಾತ್ರಗಳು ಇಡೀ ಕಥೆಯನ್ನು ನೋಡಿಸಿಕೊಳ್ಳುತ್ತವೆ. ಪವನ್ ಕುಮಾರ್ ಛಾಯಾಗ್ರಹಣ ಗ್ರಾಮ್ಯ ವಾತಾವರಣ ಸೃಷ್ಟಿಸಿದರೆ, ವಿ.ಮನೋಹರ್ ಹಿನ್ನೆಲೆ ಸಂಗೀತ ದೃಶ್ಯವನ್ನು ಕಟ್ಟಿಕೊಡಲು ನೆರವಾಗಿದೆ.