- ಮಾಲಿವುಡ್ನ ಹಲವಾರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬ್ಲಾಕ್ಬಸ್ಟರ್ ಹಿಟ್
- ಒಟಿಟಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ ಮಲಯಾಳಂ ಸಿನಿಮಾಗಳು
- ಕಡಿಮೆ ಬಜೆಟ್‌ನಲ್ಲಿ ಸೂಪರ್ಹಿಟ್ ನೋಡುತ್ತಿರುವ ಮಾಲಿವುಡ್ ಸಕ್ಸಸ್ ಗುಟ್ಟೇನು?
ಕೇರಳ: ಭಾರತೀಯ ಚಲನಚಿತ್ರೋದ್ಯಮದಲ್ಲಿ ಸದ್ಯ ವಿಚಿತ್ರ ಪರಿಸ್ಥಿತಿ ಸಾಗುತ್ತಿದೆ. ಒಂದೆಡೆ, ಬಿಗ್ ಬಜೆಟ್, ಸ್ಟಾರ್ ನಟರು ಅಭಿನಯದ ಮತ್ತು ಒಂದೆರೆಡು ವರ್ಷಗಳ ಚಿತ್ರೀಕರಣದ ಪ್ಯಾನ್ ಇಂಡಿಯಾ ಬಹುನಿರೀಕ್ಷಿತ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಅನುಭವಿಸುತ್ತಿರುವುದು ಕಳವಳಕಾರಿ. ನಿರ್ಮಾಪಕರು ದೊಡ್ಡ ತಾರಾಬಳಗವನ್ನು ಆಯ್ಕೆ ಮಾಡಿ, ಸಾಕಷ್ಟು ಪ್ರಚಾರಗಳನ್ನು ಮಾಡುವ ಮೂಲಕ ಕೋಟಿಗಟ್ಟಲೇ ಹಣ ಸುರಿದಿರುತ್ತಾರೆ. ಆದರೆ, ಅಂತಿಮವಾಗಿ ಆ ಚಿತ್ರಗಳು ಕೇವಲ ಗಲ್ಲಾಪೆಟ್ಟಿಗೆಯಲ್ಲಿ ಮಾತ್ರವಲ್ಲ, ಸಿನಿಪ್ರಿಯರಿಂದಲೂ ರಿಜೆಕ್ಟ್ ಆಗಿರುತ್ತವೆ ಎಂಬುದು ಬೇಸರದ ಸಂಗತಿ ಹಾಗೂ ಗಮನಿಸಬೇಕಾದ ವಿಷಯ.
ಸಿಂಪಲ್ ಸ್ಟೋರಿ, ಭರ್ಜರಿ ಸಕ್ಸಸ್
ಮತ್ತೊಂದೆಡೆ, ಕಡಿಮೆ ಮತ್ತು ಅತೀ ಕಡಿಮೆ ಬಜೆಟ್‌ನಲ್ಲಿ ತಯಾರಾದ ಮತ್ತು ಕೇವಲ ವಿಷಯವನ್ನು ಅವಲಂಬಿಸಿ ನಿರ್ಮಿಸಲಾದ ಮಲಯಾಳಂ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ ಮಾತ್ರವಲ್ಲದೇ, ಚಿತ್ರರಸಿಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆಗಳನ್ನು ಪಡೆಯುತ್ತಿವೆ. ಇದಕ್ಕೆ ಇತ್ತೀಚಿಗೆ ತೆರೆಕಂಡ ಹಲವಾರು ಚಿತ್ರಗಳು ಉತ್ತಮ ನಿದರ್ಶನ. ಗಳಿಕೆಯ ಜೊತೆ ಜೊತೆಗೆ ಸಾಕಷ್ಟು ದಾಖಲೆಗಳನ್ನು ಈ ಚಿತ್ರರಂಗದ ಸಿನಿಮಾಗಳು ಸೃಷ್ಟಿಸುತ್ತಿರುವುದು ಗಮನಾರ್ಹ. ಅಷ್ಟಕ್ಕೂ ಮಾಲಿವುಡ್ ಚಿತ್ರೋದ್ಯಮದ ಯಶಸ್ಸಿನ ಮಂತ್ರವೇನು? ಅವರಿಂದ ಇತರೆ ಚಿತ್ರರಂಗಗಳು ಕಲಿಯಬೇಕಾದದ್ದು ಏನಿದೆ?
ಇದಕ್ಕೆ ಮೊದಲ ಆದ್ಯತೆ
ಮೊದಲನೆಯದಾಗಿ, ಮಲಯಾಳಂ ನಿರ್ದೇಶಕರು ದುಬಾರಿ ಸೆಟ್ಗಳು, ಲಕ್ಸುರಿಗೆ ಅಷ್ಟಾಗಿ ಪ್ರಮುಖ್ಯತೆ ನೀಡೋದಿಲ್ಲ. ಬದಲಿಗೆ ವಾಸ್ತವಿಕತೆಗೆ ಮೊದಲ ಆದ್ಯತೆ ಕೊಡುತ್ತಾರೆ. ಕಥೆ ಮತ್ತು ಕಥೆಯ ಮೂಲವೇ ಚಿತ್ರದ ಜೀವಾಳ ಎಂಬ ಸ್ಪಷ್ಟತೆಯಿದೆ. ಇಲ್ಲಿನ ಬಹುತೇಕ ಸಿನಿಮಾದ ಕಥೆಗಳು ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎಂಬ ಭಾವನೆ ನೀಡುವುದು ನಿಜಕ್ಕೂ ಅದ್ಭುತ. ಇದು ನೋಡುಗರಿಗೆ ಬಹಳ ಸುಂದರ ಅನಿಸುತ್ತದೆ. ವಿದೇಶದಲ್ಲಿ ಬೃಹತ್ ಸೆಟ್ಗಳ ಮಧ್ಯೆ ನಡೆಯುವ ಆ್ಯಕ್ಷನ್ ಸನ್ನಿವೇಶಗಳು ಅಥವಾ ಚಿತ್ರೀಕರಣಗಳಿಗಿಂತ, ವ್ಯಕ್ತಿಯ ಭಾವನೆಗಳನ್ನು ಮತ್ತು ಸಮಾಜದಲ್ಲಿ ನಡೆಯುವ ಸಣ್ಣ ಹಾಗೂ ಜೀವನದ ಮೇಲೆ ಪರಿಣಾಮ ಬೀರುವಂತ ಅಂಶಗಳನ್ನೇ ಆಯ್ದು ತೆರೆಯ ಮೇಲೆ ತರುವುದು ಸದಾ ವಿಭಿನ್ನ ಪ್ರಯತ್ನವೇ ಸರಿ.
ಅಸಲಿಗೆ ಮಾಲಿವುಡ್ನ ಈ ಕೆಲಸಗಳು ಈಗ ಒಟಿಟಿಯಿಂದ ವಿಶ್ವಾದ್ಯಂತ ಅನೇಕ ಸಿನಿಪ್ರಿಯರಿಗೆ ತಲುಪುತ್ತಿದೆ. ಕಳೆದ ವರ್ಷಗಳಲ್ಲಿ ಒಟಿಟಿಯಲ್ಲಿ ತೆರೆಕಂಡ ಹಲವಾರು ಮಾಲಿವುಡ್ ಚಿತ್ರಗಳು ಭಾರೀ ಜನಪ್ರಿಯತೆ, ಯಶಸ್ಸು ಮತ್ತು ಅಧಿಕ ಲಾಭವನ್ನು ಕಂಡಿದೆ. ಅಲ್ಲದೆ, ಮಲಯಾಳಂ ಚಲನಚಿತ್ರಗಳ ತಯಾರಿಕೆಯಲ್ಲಿ ಸಾಕಷ್ಟು ಶಿಸ್ತು ಪಾಲನೆಯಿದೆ. ಕಥೆ ಮತ್ತು ತಾರಾಗಣದ ಆಯ್ಕೆಯಲ್ಲಿ ಮೊದಲನೆಯದಾಗಿ ಗೆಲ್ಲುವ ಮಲಯಾಳಂ ಇಂಡಸ್ತ್ರಿ, ಅದನ್ನು ಬೆಳ್ಳಿಪರದೆಯ ಮೇಲೆ ತೋರಿಸುವ ಮತ್ತು ಚಿತ್ರೀಕರಿಸಿರುವ ರೀತಿ ನೋಡುಗರ ಗಮನ ಸೆಳೆಯುತ್ತದೆ.
ಬಜೆಟ್ ಫ್ರೆಂಡ್ಲಿ
ಸರಿಯಾದ ಪ್ರಿ-ಪ್ರೊಡಕ್ಷನ್‌ನಿಂದಾಗಿ ಬಜೆಟ್ ಹೆಚ್ಚಾಗುವುದಿಲ್ಲ ಮತ್ತು ನಿರ್ಮಾಪಕರಿಗೆ ನಷ್ಟ ಉಂಟಾಗುವುದಿಲ್ಲ. ಇದೊಂದು ರೀತಿ ಪ್ರೊಡ್ಯೂಸರ್ಗಳಿಗೆ ಬಜೆಟ್ ಫ್ರೆಂಡ್ಲಿ ಇದ್ದಂತೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನೋಡುವುದು ಒಂದು ರೀತಿ ಅದ್ಭುತವೇ. ಚಿತ್ರದ ಫಲಿತಾಂಶ ಏನೇ ಇರಲಿ, ಬಜೆಟ್ ಅನ್ನು ಸರಿದೂಗಿಸುವಲ್ಲಿ ಈ ಚಿತರಂಗದವರು ಮುಂಚೂಣಿ. ಹೀಗಾಗಿಯೇ, ಸಣ್ಣ ಹಾಗೂ ಹೊಸಬರ ಚಿತ್ರಗಳು ಕೂಡ ದೊಡ್ಡ ಲಾಭವನ್ನು ತರುತ್ತಿವೆ. ಸಿಂಪಲ್ ಸ್ಟೋರಿ, ಕಡಿಮೆ ಬಜೆಟ್ ಮತ್ತು ಹೆಚ್ಚು ಆಕರ್ಷಿತವಾಗಿ ತೋರಿಸುವ ಪ್ರಯತ್ನಕ್ಕಿಳಿಯದೆ, ವಾಸ್ತವಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದೇ ಈ ಚಿತ್ರರಂಗಕ್ಕೆ ಮೊದಲ ಗೆಲುವು ಎನ್ನಬಹುದು.