ಗೂಳಿಗಳಿಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದ್ದೆ ಆದ್ರೆ ನನ್ನ ಸ್ಥಿತಿಯೂ ಈಗ ಅದೇ... ನಜ್ರಿಯಾ ನಿಗೂಢ ಪೋಸ್ಟ್​ ಹಿಂದಿನ ಅರ್ಥವೇನು? Nazriya Nazim 
ಮಾಲಿವುಡ್

ಗೂಳಿಗಳಿಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದ್ದೆ ಆದ್ರೆ ನನ್ನ ಸ್ಥಿತಿಯೂ ಈಗ ಅದೇ... ನಜ್ರಿಯಾ ನಿಗೂಢ ಪೋಸ್ಟ್​ ಹಿಂದಿನ ಅರ್ಥವೇನು? Nazriya Nazim

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ಚಿತ್ರರಂಗದ ಖ್ಯಾತ ನಟಿ ನಜ್ರಿಯಾ ನಾಜಿಮ್ ನಿಗೂಢ ಪೋಸ್ಟ್​
  • ಪೋಸ್ಟ್‌ನ ನಿಜವಾದ ಅರ್ಥ ಏನೆಂಬುದನ್ನು ಪತ್ತೆಹಚ್ಚಲು ಅಭಿಮಾನಿಗಳಿಗೆ ಕುತೂಹಲ
  • ಗೂಳಿಗಳಿಗೆ ಹುಚ್ಚು ಹಿಡಿದಿದೆ ಎಂದು ನಾನು ಭಾವಿಸಿದ್ದೆ ಆದ್ರೆ ನಾನೂ ಅದೇ ಸ್ಥಿತಿಯಲ್ಲಿದ್ದೇನೆಂದ ನಜ್ರಿಯಾ
Nazriya Nazim : ಮಲಯಾಳಂ ಚಿತ್ರರಂಗದ ಖ್ಯಾತ ನಟಿ ನಜ್ರಿಯಾ ನಾಜಿಮ್ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿರುವ ಒಂದು ನಿಗೂಢ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೋಸ್ಟ್‌ನ ನಿಜವಾದ ಅರ್ಥ ಏನೆಂಬುದನ್ನು ಪತ್ತೆಹಚ್ಚಲು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದು, ಇಂಟರ್ನೆಟ್‌ನಲ್ಲಿ ತರಹೇವಾರಿ ಚರ್ಚೆಗಳು ಆರಂಭವಾಗಿವೆ.
ಪ್ರತಿಭಾವಂತ ನಟ ಫಹಾದ್ ಫಾಸಿಲ್ ಅವರನ್ನು ವಿವಾಹವಾಗಿರುವ ನಜ್ರಿಯಾ, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶಿಷ್ಟವಾದ ಕೋಟ್ ಒಂದನ್ನು ಹಂಚಿಕೊಂಡಿದ್ದರು. ರೆಡ್ ಫ್ಲ್ಯಾಗ್ (ಅಪಾಯದ ಮುನ್ಸೂಚನೆ) ಬೆನ್ನಟ್ಟುವ ಗೂಳಿಗಳಿಗೆ ಹುಚ್ಚು ಹಿಡಿದಿದೆ ಎಂದು ನಾನು ಭಾವಿಸಿದ್ದೆ, ಆದರೆ ಈಗ ನಾನೂ ಅದೇ ಸ್ಥಿತಿಯಲ್ಲಿದ್ದೇನೆ ಎಂಬ ಬರಹ ನಜ್ರಿಯಾ ಅವರ ಇನ್​ಸ್ಟಾ ಸ್ಟೋರಿಯಲ್ಲಿದೆ.
.
ನಜ್ರಿಯಾ ಹಾಕಿದ ಈ ಪೋಸ್ಟ್ ನೋಡನೋಡುತ್ತಿದ್ದಂತೆ ವೈರಲ್ ಆಗಿದ್ದು, ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದರ ಹಿಂದಿರುವ ಆಳವಾದ ಅರ್ಥವೇನು ಎಂದು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಹುಡುಕಾಡುತ್ತಿದ್ದಾರೆ ಹಾಗೂ ಈ ಬಗ್ಗೆ ತಮ್ಮದೇ ಆದ ಸಿದ್ಧಾಂತಗಳನ್ನು ಮುಂದಿಡುತ್ತಿದ್ದಾರೆ.
ಈ ಸ್ಟೋರಿಯ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿರುವುದರಿಂದ, ಜನರು ಇದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಕೆಲವರು ಇದು ಅವರ ವೈಯಕ್ತಿಕ ಜೀವನದಲ್ಲಿ ನಡೆದ ಯಾವುದೋ ಘಟನೆಯನ್ನು ಸೂಚಿಸುತ್ತದೆ ಎನ್ನುತ್ತಿದ್ದರೆ, ಇನ್ನು ಕೆಲವರು ಇದು ನಜ್ರಿಯಾ ಅವರ ಮುಂಬರುವ ಸಿನಿಮಾವೊಂದಕ್ಕೆ ಸಂಬಂಧಿಸಿದ್ದಿರಬಹುದು ಎಂದು ಊಹಿಸುತ್ತಿದ್ದಾರೆ.
ವಿಶೇಷವೆಂದರೆ, ನಜ್ರಿಯಾ ನಟಿಸಲಿರುವ ಮುಂದಿನ ಸಿನಿಮಾವೊಂದಕ್ಕೆ ಸ್ಪೇನ್ ದೇಶದ ನಂಟಿದೆ ಎಂಬ ವದಂತಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಸ್ಪೇನ್ ದೇಶವು ಗೂಳಿ ಅಂಕಕ್ಕೆ ಹೆಸರುವಾಸಿಯಾಗಿರುವುದರಿಂದ, ಈ ಪೋಸ್ಟ್ ಆ ಚಿತ್ರದ ಕಥೆಗೆ ಸಂಬಂಧಿಸಿದ ಪರೋಕ್ಷ ಸುಳಿವು ಇರಬಹುದು ಎಂದು ಅನೇಕರು ಬಲವಾಗಿ ನಂಬಿದ್ದಾರೆ.
ಆದರೆ, ಇನ್ನೊಂದು ವರ್ಗದ ನೆಟ್ಟಿಗರು ಇದನ್ನು ಕೇವಲ ತಮಾಷೆಗಾಗಿ ಹಾಕಿದ ಪೋಸ್ಟ್ ಅಷ್ಟೇ, ಇದರಲ್ಲಿ ಯಾವುದೇ ಗಂಭೀರ ವಿಷಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಈ ಚರ್ಚೆಯು ನಜ್ರಿಯಾ ಅವರ ವೈಯಕ್ತಿಕ ಜೀವನದ ಕಡೆಗೂ ತಿರುಗಿದ್ದು, ಫಹಾದ್ ಫಾಸಿಲ್ ಜೊತೆಗಿನ ಅವರ ಸಂಬಂಧದ ಹಳೆಯ ವದಂತಿಗಳನ್ನು ಲಿಂಕ್ ಮಾಡಿ ಕೆಲವರು ಮಾತನಾಡಲಾರಂಭಿಸಿದ್ದಾರೆ. ದಂಪತಿ ನಡುವೆ ವೈಮನಸ್ಸು ಮೂಡಿರಬಹುದು ಮತ್ತು ಇಬ್ಬರು ಡಿವೋರ್ಸ್​ಪಡೆಯಬಹುದು ಎಂಬ ಚರ್ಚೆಯನ್ನೂ ಮಾಡುತ್ತಿದ್ದಾರೆ.
ಸದ್ಯಕ್ಕೆ ನಜ್ರಿಯಾ ಈ ಪೋಸ್ಟ್‌ನ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತೀಚೆಗಷ್ಟೇ ಮಾನಸಿಕ ಆರೋಗ್ಯದ ಕಡೆ ಗಮನಹರಿಸಲು ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಅವರು, 2024 ರ 'ಸೂಕ್ಷ್ಮದರ್ಶಿನಿ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಸದ್ಯ 'ಸೂರ್ಯ 47', ವೆಬ್ ಸೀರೀಸ್ ಸೇರಿದಂತೆ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿರುವ ನಜ್ರಿಯಾ ಪೋಸ್ಟ್‌ನ ರಹಸ್ಯ ಮಾತ್ರ ಇನ್ನು ನಿಗೂಢವಾಗಿಯೇ ಉಳಿದಿದೆ, (ಏಜೆನ್ಸೀಸ್​).