'ದಿ ಕೇರಳ ಸ್ಟೋರಿ 2' ಸಿನಿಮಾ 
ಮಾಲಿವುಡ್

ಚಿತ್ರ ನೋಡಿದ ಮೇಲೆಯೇ... ಈಗಲೇ ಹಕ್ಕುಗಳ ಮಾರಾಟ​ ಬೇಡ! 'ದಿ ಕೇರಳ ಸ್ಟೋರಿ 2' ಪ್ರೊಡ್ಯೂಸರ್​ಗೆ ಹೈಕೋರ್ಟ್​ ತಾಕೀತು

ಪ್ರಮುಖ ಮುಖ್ಯಾಂಶಗಳು

  • ದಿ ಕೇರಳ ಸ್ಟೋರಿ 2 ಚಿತ್ರ ರಿಲೀಸ್​ಗೂ ಮುನ್ನವೇ ಭಾರೀ ವಿವಾದ
  • ಟ್ರೇಲರ್​ನಲ್ಲಿ ತೋರಿಸಲಾದ ದೃಶ್ಯದ ಬಗ್ಗೆ ಹಲವರು ಕೆಂಡ
  • ಅರ್ಜಿ ವಿಚಾರಣೆ ಹಂತದಲ್ಲಿರುವಾಗ ರಿಲೀಸ್​, ಹಕ್ಕು ಮಾರಾಟ ಬೇಡಬೆಂದ ಕೇರಳ ಹೈಕೋರ್ಟ್​
The Kerala Story 2: ಇದೇ ಫೆ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬೇಕಿದ್ದ 'ದಿ ಕೇರಳ ಸ್ಟೋರಿ' 2 ಚಿತ್ರಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಟ್ರೇಲರ್​ ಹೊರಬಿದ್ದ ದಿನದಿಂದಲೂ ಸಿನಿಮಾಗೆ ಭಾರೀ ವಿರೋಧ, ಆಕ್ರೋಶಗಳು ವ್ಯಕ್ತವಾಗಿದ್ದು, ಒಂದಷ್ಟು ಅರ್ಜಿಗಳು ಬಿಡುಗಡೆಗೆ ತಡೆ ಕೋರಿ ಕೋರ್ಟ್​ ಮೊರೆ ಹೋಯಿತು. ಈ ನಿಟ್ಟಿನಲ್ಲಿ, ಕೇರಳ ಹೈಕೋರ್ಟ್​ ಸದ್ಯ ಚಿತ್ರದ ರಿಲೀಸ್​ ಕುರಿತು ವಿಚಾರಣೆ ಮುಂದುವರಿಸಿದೆ.
ಪ್ರಸ್ತುತ, ಅರ್ಜಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಇದೆಲ್ಲ ಸಂಪೂರ್ಣ ಮುಗಿಯುವವರೆಗೂ ಚಿತ್ರದ ಹಕ್ಕು ಮಾರಾಟ ಮಾಡುವುದು ಬೇಡ ಎಂದು ನ್ಯಾಯಾಲಯ ಚಿತ್ರತಂಡಕ್ಕೆ ತಿಳಿಸಿದೆ. ಇನ್ನು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರನ್ನೊಳಗೊಂಡ ಪೀಠವು, ನಾವು ಸಿನಿಮಾವನ್ನು ನೋಡುತ್ತೇವೆ. ಅದಾದ ಬಳಿಕ ರಿಲೀಸ್​ ಬಗ್ಗೆ ತಿಳಿಸುತ್ತೇವೆ ಎಂದಿದೆ.
ಇದಕ್ಕೆ ಒಪ್ಪಿದ ನಿರ್ಮಾಪಕರು, ಚಿತ್ರವನ್ನು ತೋರಿಸಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದರು. ಇದರೊಟ್ಟಿಗೆ, ಟೀಸರ್‌ನಲ್ಲಿ ತೋರಿಸಿರುವ ಕೆಲವು ದೃಶ್ಯಗಳ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಅಷ್ಟಕ್ಕೂ, ಸಿನಿಮಾ ಬೇರೆಯೇ ಇದೆ. ಕೇವಲ ಟೀಸರ್ ಟ್ರೇಲರ್​​ ನೋಡಿ ಒಂದು ಅಭಿಪ್ರಾಯಕ್ಕೆ ಬರಬಾರದು. ಜತೆಗೆ ಇಲ್ಲಿ ಪ್ರಚಾರಕ್ಕಾಗಿ ಯಾವುದನ್ನೂ ತೋರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಹುನಿರೀಕ್ಷಿತ ಚಿತ್ರವು ಬಿಡುಗಡೆಗೂ ಮೊದಲೇ ಭಾರೀ ವಿವಾದಕ್ಕೆ ಗುರಿಯಾಗಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಗಿದೆ. ಕೇರಳ ಸ್ಟೋರಿ ಮೊದಲ ಭಾಗಕ್ಕೆ ತಟ್ಟಿದ್ದ ರಾಜಕೀಯ ಬಿಸಿ ಈಗ ಎರಡನೇ ಭಾಗಕ್ಕೂ ತಟ್ಟಲಾರಂಭಿಸಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ಸಿನಿಮಾದ ಟ್ರೇಲರ್​ನಲ್ಲಿ ತೋರಿಸಲಾದ ಕೆಲವು ದೃಶ್ಯಗಳು ಸದ್ಯ ಭಾರೀ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು, ಈ ಸಿನಿಮಾ ಕೇರಳವನ್ನು ಕೆಟ್ಟದಾಗಿ ಬಿಂಬಿಸಲಿದೆ. ಇದು ಸರಿಯಲ್ಲ. ಹೀಗಾಗಿ ಚಿತ್ರವು ರಿಲೀಸ್ ಆಗೋದು ಬೇಡ ಎಂದು ಆಕ್ಷೇಪಿಸಿದ್ದಾರೆ.
ಕಾಮಾಕ್ಯ ನಾರಾಯಣ್​ ಸಿಂಗ್ ನಿರ್ದೇಶನದ 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ತೀವ್ರ ಆಕ್ಷೇಪ ಹೊರಹಾಕಿದ್ದಾರೆ. ಇದೆಲ್ಲವೂ ಸುಳ್ಳು ಪ್ರಚಾರ ಮತ್ತು ರಾಜ್ಯದ ಜಾತ್ಯತೀತ ಮೌಲ್ಯಗಳಿಗೆ ಬೆದರಿಕೆ ತಂದಿಡುವ ಉದ್ದೇಶ. ನಾಡಿನಲ್ಲಿ ದ್ವೇಷದ ಕಿಚ್ಚನ್ನು ಹೊತ್ತಿಸುವ ಕೆಲಸ ಈ ಚಿತ್ರದ ಮೂಲಕ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಂದೆಡೆ, ಇದೇ ವಿಚಾರಕ್ಕೆ ದನಿಗೂಡಿಸಿರುವ ಬಿಜೆಪಿ ನಾಯಕರು, ಈ ಸಿನಿಮಾ ಸತ್ಯಾಸತ್ಯತೆಯನ್ನು ತೋರಿಸುವ ಪ್ರಯತ್ನದಲ್ಲಿದೆ ಎಂದು ಬಿಡುಗಡೆಗೆ ಬೆಂಬಲಿಸಿದ್ದಾರೆ.
ಈ ಮಧ್ಯೆ, ಬಾಲಿವುಡ್ ನಿರ್ದೇಶಕ ಹಾಗೂ ನಟ ಅನುರಾಗ್ ಕಶ್ಯಪ್ ಕೂಡ 'ದಿ ಕೇರಳ ಸ್ಟೋರಿ 2' ಚಿತ್ರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಸಮಾಜವನ್ನು ಇಬ್ಭಾಗ ಮಾಡಲು ಮತ್ತು ಹಣ ಗಳಿಸುವ ಸಲುವಾಗಿ ಇಂತಹ ಸಿನಿಮಾಗಳನ್ನು ಮಾಡಿದ್ದಾರೆ ಎಂದರು. ಚಿತ್ರದ ಟ್ರೇಲರ್‌ನಲ್ಲಿ ಮುಸ್ಲಿಂ ಕುಟುಂಬವು ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸ ತಿನ್ನಿಸುವುದನ್ನು ತೋರಿಸಲಾಗಿದೆ. ಇದರ ಕುರಿತು ಮಾತನಾಡಿದ ಅನುರಾಗ್, ನಿಜ ಜೀವನದಲ್ಲಿ ಯಾರೂ ಹಾಗೆ ಮಾಡೋದಿಲ್ಲ. ಗೋಮಾಂಸ ಬಿಡಿ, ಕನಿಷ್ಠ ಯಾರೂ ಕಿಚಡಿ ತಿನ್ನಲು ಸಹ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ.