ಕೇರಳ ಹೈಕೋರ್ಟ್, 'ದಿ ಕೇರಳ ಸ್ಟೋರಿ 2' ಚಿತ್ರ
- 'ದಿ ಕೇರಳ ಸ್ಟೋರಿ 2' ಚಿತ್ರ ರಿಲೀಸ್ಗೂ ಮುನ್ನವೇ ಭಾರೀ ವಿವಾದ
- ಟ್ರೇಲರ್‌ನಲ್ಲಿ ತೋರಿಸಲಾದ ದೃಶ್ಯದ ಬಗ್ಗೆ ಹಲವರು ಕೆಂಡ
- ಫೆ.27ರಂದು ರಿಲೀಸ್ ಆಗಬೇಕಿದ್ದ ಚಿತ್ರಕ್ಕೆ ತಡೆ ನೀಡಿದ ಹೈಕೋರ್ಟ್
The Kerala Story 2: ಇದೇ ಫೆ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬೇಕಿದ್ದ 'ದಿ ಕೇರಳ ಸ್ಟೋರಿ' 2 ಚಿತ್ರಕ್ಕೆ ಸದ್ಯ ಕಾನೂನು ಸಂಕಷ್ಟ ಎದುರಾಗಿದೆ. ಟ್ರೇಲರ್ ಹೊರಬಿದ್ದ ದಿನದಿಂದಲೂ ಸಿನಿಮಾಗೆ ಭಾರೀ ವಿರೋಧ, ಆಕ್ರೋಶಗಳು ವ್ಯಕ್ತವಾಗಿದ್ದು, ಒಂದಷ್ಟು ಅರ್ಜಿಗಳು ಬಿಡುಗಡೆಗೆ ತಡೆ ಕೋರಿ ಕೋರ್ಟ್ ಮೊರೆ ಹೋಯಿತು. ಈ ನಿಟ್ಟಿನಲ್ಲಿ, ಇಂದು (ಫೆ.26) ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಸೆನ್ಸಾರ್ಗೆ ಮಂಡಳಿಗೆ ತಪರಾಕಿ ಹಾಕಿ, ಚಿತ್ರದ ರಿಲೀಸ್ಗೆ ತಡೆ ನೀಡಿದೆ.
ನಿನ್ನೆ ಅರ್ಜಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಇದೆಲ್ಲ ಸಂಪೂರ್ಣ ಮುಗಿಯುವವರೆಗೂ ಚಿತ್ರದ ಹಕ್ಕು ಮಾರಾಟ ಮಾಡುವುದು ಬೇಡ ಎಂದು ನ್ಯಾಯಾಲಯ ಚಿತ್ರತಂಡಕ್ಕೆ ಆದೇಶಿಸಿತು. ಇನ್ನು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರನ್ನೊಳಗೊಂಡ ಪೀಠವು, ನಾವು ಸಿನಿಮಾವನ್ನು ನೋಡುತ್ತೇವೆ. ಅದಾದ ಬಳಿಕ ರಿಲೀಸ್ ಬಗ್ಗೆ ತಿಳಿಸುತ್ತೇವೆ ಎಂದಿತು. ಆದರೆ, ಇಂದಿನ ವಿಚಾರಣೆಯಲ್ಲಿ, ಸಿಬಿಎಫ್ಸಿ ಯಾವ ಆಧಾರದ ಮೇಲೆ ಗ್ರೀನ್ ಸಿಗ್ನಲ್ ನೀಡಿತು ಎಂದು ಪ್ರಶ್ನಿಸಿ, ಸಿನಿಮಾವನ್ನು ಮುಂದಿನ ಎರಡು ವಾರಗಳ ಕಾಲ ಬಿಡುಗಡೆ ಮಾಡುವುದು ಬೇಡ ಎಂದು ಆದೇಶದಲ್ಲಿ ತಿಳಿಸಿದೆ.
ಕೋರ್ಟ್ ತಡೆ ನೀಡಿದ್ದೇಕೆ?
"ಕೇರಳವು ವಿವಿಧ ಧರ್ಮಗಳ ನಡುವೆ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ. ಆದರೆ, ಕೇರಳದಾದ್ಯಂತ ಇದೇ ನಡೆಯುತ್ತಿದೆ ಎಂಬ ರೀತಿಯಲ್ಲಿ ಚಿತ್ರಿಸುವುದು ತಪ್ಪು ಕಲ್ಪನೆ ಹಾಗೂ ಸಂದೇಶವನ್ನು ಸಾರುತ್ತದೆ. ಭಾವನೆಗಳಿಗೆ ಧಕ್ಕೆ ತರಬಹುದು ಮತ್ತು ಪ್ರಚೋದಿಸಬಹುದು. ಇಲ್ಲಿ ಸೆನ್ಸಾರ್ ಮಂಡಳಿಯು ಪಾತ್ರ ವಹಿಸಬೇಕಿತ್ತು. ಸ್ವಲ್ಪ ಬುದ್ಧಿ ಉಪಯೋಗಿಸಬೇಕಿತ್ತು" ಎಂದು ನ್ಯಾಯಾಲಯ ಹೇಳಿದೆ.
ಭಾರೀ ವಿರೋಧ
ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ತೀವ್ರ ಆಕ್ಷೇಪ ಹೊರಹಾಕಿದ್ದಾರೆ. ಇದೆಲ್ಲವೂ ಸುಳ್ಳು ಪ್ರಚಾರ ಮತ್ತು ರಾಜ್ಯದ ಜಾತ್ಯತೀತ ಮೌಲ್ಯಗಳಿಗೆ ಬೆದರಿಕೆ ತಂದಿಡುವ ಉದ್ದೇಶ. ನಾಡಿನಲ್ಲಿ ದ್ವೇಷದ ಕಿಚ್ಚನ್ನು ಹೊತ್ತಿಸುವ ಕೆಲಸ ಈ ಚಿತ್ರದ ಮೂಲಕ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಂದೆಡೆ, ಇದೇ ವಿಚಾರಕ್ಕೆ ದನಿಗೂಡಿಸಿರುವ ಬಿಜೆಪಿ ನಾಯಕರು, ಈ ಸಿನಿಮಾ ಸತ್ಯಾಸತ್ಯತೆಯನ್ನು ತೋರಿಸುವ ಪ್ರಯತ್ನದಲ್ಲಿದೆ ಎಂದು ಬಿಡುಗಡೆಗೆ ಬೆಂಬಲಿಸಿದ್ದಾರೆ.
ಈ ಮಧ್ಯೆ, ಬಾಲಿವುಡ್ ನಿರ್ದೇಶಕ ಹಾಗೂ ನಟ ಅನುರಾಗ್ ಕಶ್ಯಪ್ ಕೂಡ 'ದಿ ಕೇರಳ ಸ್ಟೋರಿ 2' ಚಿತ್ರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಸಮಾಜವನ್ನು ಇಬ್ಭಾಗ ಮಾಡಲು ಮತ್ತು ಹಣ ಗಳಿಸುವ ಸಲುವಾಗಿ ಇಂತಹ ಸಿನಿಮಾಗಳನ್ನು ಮಾಡಿದ್ದಾರೆ ಎಂದರು. ಚಿತ್ರದ ಟ್ರೇಲರ್‌ನಲ್ಲಿ ಮುಸ್ಲಿಂ ಕುಟುಂಬವು ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸ ತಿನ್ನಿಸುವುದನ್ನು ತೋರಿಸಲಾಗಿದೆ. ಇದರ ಕುರಿತು ಮಾತನಾಡಿದ ಅನುರಾಗ್, ನಿಜ ಜೀವನದಲ್ಲಿ ಯಾರೂ ಹಾಗೆ ಮಾಡೋದಿಲ್ಲ. ಗೋಮಾಂಸ ಬಿಡಿ, ಕನಿಷ್ಠ ಯಾರೂ ಕಿಚಡಿ ತಿನ್ನಲು ಸಹ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ.