ಕುಡಿದು ವಾಹನ ಚಲಾಯಿಸುತ್ತಿರುವ ದೃಶ್ಯ ಮತ್ತು ನಟಿ ನವ್ಯಾ ನಾಯರ್
- ಕುಡುಕರ ಹಾವಳಿಯ ಬಗ್ಗೆ ನಿಮಗೆಲ್ಲ ವಿಶೇಷವಾಗಿ ಹೇಳಬೇಕಿಲ್ಲ
- ಕುಡಿದು ರಸ್ತೆಗಿಳಿದರೆ ಸಾಕು ನಾನೇ ಯಜಮಾನ ಅನ್ನೋ ರೀತಿ ವರ್ತಿಸುತ್ತಾರೆ
- ನಟಿ ನವ್ಯಾ ನಾಯರ್ ಅವರು ಕುಡುಕರ ಹಾವಳಿಯ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ
ತಿರುವನಂತಪುರ: ಕುಡುಕರ ( Drunken men ) ಹಾವಳಿಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈಗಾಗಲೇ ನಾವು ಸಾಕಷ್ಟು ಘಟನೆಗಳನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಕಂಠಪೂರ್ತಿ ಕುಡಿದು ರಸ್ತೆಗೆ ಇಳಿದರೆ ಸಾಕು ಆ ರಸ್ತೆಗೆ ನಾನೇ ಯಜಮಾನ ಎನ್ನುವಂತೆ ಬೇಕಾಬಿಟ್ಟಿ ಗಾಡಿ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಮಾತ್ರವಲ್ಲದೇ ಬೇರೆಯವರ ಪ್ರಾಣವನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಕುಡಿದು ವಾಹನ ಚಲಾಯಿಸಬೇಡಿ ಎಂದು ಎಷ್ಟೇ ಹೇಳಿದರು ಕೂಡ ಅದನ್ನು ಗಾಳಿಗೆ ತೂರಿ ಕುಡುಕರ ಸಾಮ್ರಾಜ್ಯದಲ್ಲಿ ನಮ್ಮದೇ ರಾಜ್ಯಭಾರ ಎನ್ನುವಂತೆ ಅಪಾಯಕಾರಿ ವರ್ತನೆ ತೋರುತ್ತಾರೆ.
ಹೌದು, ಕುಡುಕರ ವಿಚಾರ ಈಗ ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೊಂದು ಕಾರಣವಿದೆ. ನಿಮಗೆ ನವ್ಯಾ ನಾಯರ್ ( Navya Nair ) ಗೊತ್ತಿದೆ ಅಲ್ವಾ? ಕನ್ನಡಿಗರಿಗೆ ಅವರ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ, ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಗಜ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಅಲ್ಲದೆ, ನಮ್ಮೆಜಮಾನ್ರು, ಭಾಗ್ಯದ ಬಳೆಗಾರ, ಬಾಸ್ ಹಾಗೂ ದೃಶ್ಯ 1 ಮತ್ತು 2 ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾಗಿದ್ದಾರೆ.
ಅದು ಸರಿ, ನವ್ಯಾ ನಾಯರ್ಗೂ ಕುಡುಕರಿಗೂ ಏನು ಸಂಬಂಧ ಅನ್ನೋ ಮತ್ತೊಂದು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ನವ್ಯಾ ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಕುಡುಕರ ಹಾವಳಿಯ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕುಡಿದ ಮತ್ತು ನೆತ್ತಿಗೆ ಏರಿದರೆ ಏನಾಗುತ್ತದೆ ಎಂಬುದನ್ನು ಆ ವಿಡಿಯೋ ತೋರಿಸುತ್ತದೆ.
ಅಂದಹಾಗೆ, ನವ್ಯಾ ನಾಯರ್ ಅವರು ಇತ್ತೀಚೆಗೆ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಸೆರೆಹಿಡಿದ ವಿಡಿಯೋ ಇದಾಗಿದೆ. ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ನವ್ಯಾ ಹಂಚಿಕೊಂಡಿರುವ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂತಹ ಕುಡುಕರಿಗೆ ಕಡಿವಾಣ ಹಾಕದೇ ಹೋದರೆ ತುಂಬಾ ಕಷ್ಟ ಅನ್ನೋ ಅಭಿಪ್ರಾಯಗಳು ಬರುತ್ತಿವೆ. ಅಷ್ಟಕ್ಕೂ ಏನಾಯ್ತು ಅಂದರೆ, ತಮ್ಮ ಕಾರಿನ ಮುಂದೆ ಹಾದು ಹೋದ ಸ್ಕೂಟರ್ ಒಂದರ ವಿಡಿಯೋವನ್ನು ನವ್ಯಾ ಹಂಚಿಕೊಂಡಿದ್ದಾರೆ. ಇಲ್ಲಿ ವಾಹನ ಚಲಾಯಿಸುತ್ತಿರುವುದು ಸ್ಕೂಟರ್ ಹಿಂದೆ ಕುಳಿತಿರುವ ವ್ಯಕ್ತಿಯೋ? ಅಥವಾ ಮುಂದೆ ಕುಳಿತಿರುವ ವ್ಯಕ್ತಿಯೋ? ನನಗೆ ಗೊತ್ತಾಗುತ್ತಿಲ್ಲ ಎಂದು ನವ್ಯಾ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಅಡ್ಡಾದಿಡ್ಡಿಯಾಗಿ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿ ಓಡುತ್ತಿರುವ ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿತಿರುವ ವ್ಯಕ್ತಿ ಇನ್ನೇನು ಬೀಳುವ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಒಂದು ಹಂತದಲ್ಲಿ ಬಿದ್ದೇ ಹೋದ ಅನಿಸುತ್ತದೆ. ಅಲ್ಲದೆ, ವಾಹನ ಚಲಾಯಿಸುತ್ತಿರುವ ವ್ಯಕ್ತಿಯು ಸಹ ಕುಡಿದಿದ್ದಾನೆ. ಇಬ್ಬರು ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುತ್ತಾರೆ. ಕೊನೆಗೆ, ಒಂದು ಸ್ಥಳದಲ್ಲಿ ನಿಲ್ಲಿಸುತ್ತಾರೆ. ನಿಲ್ಲಿಸುವಾಗಲೂ ಇನ್ನೇನು ಬಿದ್ದೇ ಬಿಟ್ಟರು ಎಂದು ಭಾಸವಾಗುತ್ತದೆ.
ವಿಡಿಯೋ ಹಂಚಿಕೊಂಡಿರುವ ನವ್ಯಾ, ಕೆಲವು ರಸ್ತೆಬದಿಯ ದೃಶ್ಯಗಳು ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೂರಾರು ಕಾಮೆಂಟ್ಗಳು ಹರಿದುಬರುತ್ತಿವೆ. ಕುಡಿದು ಈ ರೀತಿ ವಾಹನ ಚಲಾಯಿಸುವುದು ನಿಜವಾಗಿಯೂ ಮಹಾ ತಪ್ಪು, ಇಂತಹವರಿಗೆ ಕಠಿಣ ಶಿಕ್ಷೆ ಅಥವಾ ಭಾರಿ ದಂಡವನ್ನು ವಿಧಿಸಬೇಕು ಎಂದು ಅನೇಕ ನೆಟ್ಟಿಗರು ಆಗ್ರಹಿಸಿದ್ದಾರೆ, (ಏಜೆನ್ಸೀಸ್).