- ಮಲಯಾಳಂ ಕಿರುತೆರೆ ನಟಿ ರೇಖಾ ರತೀಶ್ ಕಣ್ಣೀರು
- ಕೇರಳ ಸಿಎಂಗೆ ವಿಡಿಯೋ ಮೂಲಕ ಅಳಲು ತೋಡಿಕೊಂಡ ನಟಿ
- ತನ್ನ ನೋವಿಗೆ, ಕಣ್ಣೀರಿಗೆ ಆ ಯೂಟ್ಯೂಬರ್‌ಗಳೇ ಕಾರಣ ಎಂದು ಆರೋಪ
ಕೇರಳ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸರ್ಕಾರಕ್ಕೆ ವಿಡಿಯೋ ಮೂಲಕ ತನ್ನ ಅಳಲು ತೋಡಿಕೊಂಡ ಕಿರುತೆರೆ ನಟಿ ರೇಖಾ ರತೀಶ್, ನನಿಗೇನಾದರೂ ಹೆಚ್ಚುಕಮ್ಮಿ ಆದರೆ, ಅದಕ್ಕೆ ಆ ಯೂಟ್ಯೂಬರ್‌ಗಳೇ ನೇರ ಹೊಣೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ಕಿರುತೆರೆ ನಟಿ ಅಳಲು
'ಆರಾಮ್ಶ', 'ಸಸ್ನೇಹಂ', 'ಆಟೋಗ್ರಾಫ್', 'ಸ್ನೇಹಕೂಡು' ಸೇರಿದಂತೆ ವಿವಿಧ ಚಾನೆಲ್‌ಗಳಲ್ಲಿ ಹಲವಾರು ಧಾರವಾಹಿಗಳಿಂದ ವೀಕ್ಷಕರ ಮನೆ, ಮನ ತಲುಪಿರುವ ರೇಖಾ ರತೀಶ್, ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ತಮ್ಮ ಮುಕ್ತ ದೂರನ್ನು ಸಿಎಂ ಮುಂದಿಟ್ಟಿದ್ದಾರೆ. ಕಣ್ಣೀರಾಕುತ್ತಲೇ ಕಷ್ಟವನ್ನು ಹಂಚಿಕೊಂಡ ಸೀರಿಯಲ್ ತಾರೆಗೆ ಕಮೆಂಟ್ ಮೂಲಕ ನೆಟ್ಟಿಗರು ವ್ಯಾಪಕ ಬೆಂಬಲ ಸೂಚಿಸಿದ್ದಾರೆ.
ಹಲವು ತಿಂಗಳಿಂದ ಚಿತ್ರಹಿಂಸೆ
ಕಳೆದ 8-9 ತಿಂಗಳಿನಿಂದ ತಾನು ಕೆಲಸವಿಲ್ಲದೆ ಫ್ಲಾಟ್‌ನಲ್ಲಿ ಬದುಕು ಸಾಗಿಸುತ್ತಿದ್ದೇನೆ. ಈ ಮಧ್ಯೆ, ಎರಡ್ಮೂರು ತಿಂಗಳಿನಿಂದ ಯೂಟ್ಯೂಬರ್‌ಗಳ ಗುಂಪೊಂದು ನನ್ನನ್ನು ನಿರಂತರವಾಗಿ ಫಾಲೋ ಮಾಡುತ್ತಿದೆ. ಅವರೆಲ್ಲ ನನ್ನ ವಿಡಿಯೋಗಳನ್ನು ಕೆಟ್ಟ, ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ಟೈಟಲ್ ಕೊಟ್ಟು ಹರಿಬಿಡುತ್ತಿದ್ದಾರೆ. ನನ್ನನ್ನು ಬದುಕಲು ಬಿಡದಂತೆ ಚಿತ್ರಹಿಂಸೆ ನೀಡ್ತಿದ್ದಾರೆ. ಈ ಮಾನಸಿಕ ಒತ್ತಡವನ್ನು ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
"ನಾನು ನನ್ನ ಮಗನಿಗಾಗಿ ಬದುಕು ಮುಂದುವರಿಸಲು ಕಷ್ಟಪಡುತ್ತಿರುವ ಮಹಿಳೆ. ಆದರೆ, ಈ ಯೂಟ್ಯೂಬರ್‌ಗಳಿಂದಾಗಿ, ನಾನು ಬದುಕುವ ಶಕ್ತಿ, ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದೇನೆ. ಇದೇ ಈ ವಿಡಿಯೋ ಮಾಡಲು ಕಾರಣ. ನನಗೆ ಏನಾದರೂ ಸಂಭವಿಸಿದರೆ, ಆ ಯೂಟ್ಯೂಬರ್‌ಗಳೇ ಕಾರಣ. ಇದೆಲ್ಲವೂ ಶೀಘ್ರವೇ ಕೊನೆಗೊಳ್ಳಬೇಕು. ಕೇವಲ ನನ್ನ ಮಾತ್ರವಲ್ಲದೆ, ಇನ್ನೂ ಹಲವಾರು ಕಲಾವಿದರನ್ನು ಇದೇ ರೀತಿಯಲ್ಲಿ ಶೋಷಿಸುವ ಯೂಟ್ಯೂಬರ್‌ಗಳ ಗುಂಪಿವೆ" ಎಂದು ರೇಖಾ ಆರೋಪಿಸಿದ್ದಾರೆ,(ಏಜೆನ್ಸೀಸ್).