ಮೋಹನ್​ ಲಾಲ್​-ಪ್ರಿಯ ದರ್ಶನ್​ 
ಮಾಲಿವುಡ್

ಮೋಹನ್‌ಲಾಲ್‌ಗೆ ‘ಪ್ರಿಯ’ ಶತಕ : ಮಾಲಿವುಡ್‌ನಲ್ಲಿ ಮೈಲಿಗಲ್ಲು ಸಾಧಿಸಲು ಸಿದ್ಧವಾದ ಹಿಟ್ ಜೋಡಿ

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ಹಿಟ್ ಜೋಡಿಯ 43 ವರ್ಷಗಳ ಸಿನಿಮಾ ಪಯಣ
  • ಪ್ರಿಯದರ್ಶನ್ ನಿರ್ದೇಶನದ 100ನೇ ಚಿತ್ರಕ್ಕೆ ಮೋಹನ್ ಲಾಲ್ ನಾಯಕ
  • ಒಬ್ಬ ನಟನಿಗೆ ಮೊದಲನೇ, 100ನೇ ಸಿನಿಮಾ ನಿರ್ದೇಶನ
ಮಲಯಾಳಂನ ಚಿತ್ರರಂಗದಲ್ಲಿ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಹಿಟ್ ಜೋಡಿಗಳಲ್ಲಿ ಒಂದು. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಈಗಾಗಲೇ ಬರೋಬ್ಬರಿ 40ಕ್ಕೂ ಅಧಿಕ ಸಿನಿಮಾಗಳು ಮೂಡಿಬಂದಿವೆ. 1980ರ ದಶಕದಲ್ಲಿ ಆರಂಭವಾದ ಈ ಜೋಡಿಯ ಸಿನಿಮಾ ಜರ್ನಿ ಇಲ್ಲಿಯವರೆಗೂ ಬಂದು ನಿಂತಿದೆ. ಇಂತಹ ಅಪರೂಪದ ಜೋಡಿ ಇದೀಗ ಭಾರತೀಯ ಚಿತ್ರರಂಗದಲ್ಲಿಯೇ ದೊಡ್ಡ ಮೈಲಿಗಲ್ಲು ಸಾಧಿಸಲು ಹೊರಟಿದೆ. ನಿರ್ದೇಶಕ ಪ್ರಿಯದರ್ಶನ್ ಸದ್ಯ ‘ಭೂತ್ ಬಂಗ್ಲಾ’ ಹಾಗೂ ‘ಹೈವಾನ್’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಆ ನಡುವೆಯೇ ಅವರು ಕೆಲ ತಿಂಗಳ ಹಿಂದೆ ನಟ ಮೋಹನ್‌ಲಾಲ್ ಜತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದು ಅವರ ನಿರ್ದೇಶನದ 100ನೇ ಸಿನಿಮಾ. ಈ ಮೂಲಕ ಪ್ರಿಯದರ್ಶನ್ ಇಂತಹ ಅಪರೂಪದ ಸಾಧನೆ ಮಾಡಿದ ಕೆಲವೇ ಕೆಲವು ನಿರ್ದೇಶಕರ ಪಟ್ಟಿಗೆ ಸೇರ್ಪಡೆಯಾಗಲು ಸಿದ್ಧರಾಗುತ್ತಿದ್ದಾರೆ. ಇನ್ನು ವಿಶೇಷ ಏನೆಂದರೆ, ಮೋಹನ್‌ಲಾಲ್ ಅಭಿನಯದ ‘ಪೂಚ್ಚಕ್ಕೂರು ಮೂಕ್ಕುತಿ’ ಚಿತ್ರದ ಮೂಲಕವೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದ ಪ್ರಿಯದರ್ಶನ್ ಇದೀಗ ಅದೇ ನಟನಿಗೆ ತಮ್ಮ ವೃತ್ತಿ ಜೀವನದ 100ನೇ ಸಿನಿಮಾ ನಿರ್ದೇಶಿಸುತ್ತಿರುವುದು ಗಮನಾರ್ಹ ಸಂಗತಿ. ಶನಿವಾರ ಅಧಿಕೃತವಾಗಿ ಸಿನಿಮಾ ಸೆಟ್ಟೇರಿದ್ದು, ಇನ್ನು ಟೈಟಲ್ ಘೋಷಣೆ ಮಾಡಬೇಕಷ್ಟೇ. ನಟ ಮೋಹನ್‌ಲಾಲ್ ಭಾವುಕರಾಗಿ ಪೋಸ್ಟ್ ಮಾಡಿದ್ದು, ‘ಕೆಲವು ಮೈಲಿಗಲ್ಲು ಒಬ್ಬ ವ್ಯಕ್ತಿಗೆ ಸೇರುವುದಿಲ್ಲ. ನಮ್ಮ ಜತೆ ಹೆಜ್ಜೆ ಹಾಕಿದವರಿಗೂ ಸೇರುತ್ತದೆ. ಇದೀಗ ಪ್ರಿಯದರ್ಶನ್ 100ನೇ ಚಿತ್ರದ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ. ಈ ಕ್ಷಣವನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಇದು ಕೇವಲ ಸಂಖ್ಯೆಯಲ್ಲ, ಉತ್ಸಾಹದಿಂದ ಹೇಳಿರುವ ಕಥೆಗಳ ಜೀವಿತಾವಧಿ ಹಾಗೂ ಸಿನಿಮಾ ಮೇಲಿನ ಅತಿಯಾದ ಪ್ರೀತಿ, ನಂಬಿಕೆ. ಇದೀಗ ಈ ಅಪರೂಪದ ಪ್ರಯಾಣದ ಭಾಗವಾಗಲು ನನಗೆ ಗೌರವವಿದೆ’ ಎಂದು ಪ್ರಿಯದರ್ಶನ್‌ರನ್ನು ಲಾಲೆಟ್ಟೆನ್ ಕೊಂಡಾಡಿದ್ದಾರೆ. -ಏಜೆನ್ಸೀಸ್
43 ವರ್ಷ, 45 ಸಿನಿಮಾ
ನಿರ್ದೇಶಕ ಪ್ರಿಯದರ್ಶನ್, ನಟ ಮೋಹನ್‌ಲಾಲ್ ಜೋಡಿಯ ಸಿನಿ ಜರ್ನಿ 43 ವರ್ಷಗಳ ಸುದೀರ್ಘವಾದುದು. ಮೋಹನ್‌ಲಾಲ್ ಅಭಿನಯದ ‘ಸಿಂಧೂರ ಸಂಧ್ಯಕ್ಕೂ ಮೌನಂ’, ‘ಭೂಕಂಬಂ’ ಮತ್ತು ‘ವನೀತಾ ಪೊಲೀಸ್’ ಚಿತ್ರಗಳಿಗೆ ಮೊದಲಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಪ್ರಿಯದರ್ಶನ್, 1984ರಲ್ಲಿ ತೆರೆಕಂಡ ‘ಪೂಚ್ಚಕ್ಕೊರು ಮೂಕ್ಕುತಿ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದರು. ಅಲ್ಲಿಂದ ಆರಂಭವಾದ ಈ ಜೋಡಿಯ ಸಿನಿಮಾ ಪಯಣ ಬಳಿಕ ‘ಬೋಯಿಂಗ್ ಬೋಯಿಂಗ್’, ‘ಚಿತ್ರಂ’, ‘ಹಲೋ ಮೈ ಡಿಯರ್ ರಾಂಗ್ ನಂಬರ್’, ‘ಮಿಥುನಂ’, ‘ಅಭಿಮನ್ಯು ಮಿನ್ನಾರಂ’, ‘ಚಂದ್ರಲೇಖ’, ‘ಕಾಲಾಪಾನಿ’ ಹೀಗೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ಇನ್ನು 2021ರಲ್ಲಿ ತೆರೆಕಂಡಿದ್ದ ‘ಮರಕ್ಕರ್: ಲಯನ್ ಆ್ ದ ಅರೇಬಿಯಾನ್ ಸೀ’ ತೆರೆಕಂಡು ಐದು ವರ್ಷಗಳ ಬಳಿಕ ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ.
ಅಪರೂಪದ ಶತಕ ಸಾಧಕರು
ಭಾರತೀಯ ಚಿತ್ರರಂಗದಲ್ಲಿ 100ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದವರು ಬೆರಳೆಣಿಕೆಯಷ್ಟು ಮಾತ್ರ. ತೆಲುಗಿನ ದಾಸರಿ ನಾರಾಯಣ್ ರಾವ್ (150 ಚಿತ್ರಗಳು), ಕೆ.ರಾಘವೇಂದ್ರ ರಾವ್ (110), ಮಲಯಾಳಂನ ಶಶಿಕುಮಾರ್ (141), ಐ.ವಿ. ಶಶಿ (110), ಕನ್ನಡದ ಓಂ ಸಾಯಿ ಪ್ರಕಾಶ್ (105) ಚಿತ್ರಗಳನ್ನು ನಿರ್ದೇಶಿಸಿ, ಶತಕ ಬಾರಿಸಿದ್ದಾರೆ. ಇದೀಗ ಈ ಪಟ್ಟಿಗೆ ಮಲಯಾಳಂನ ಪ್ರಿಯದರ್ಶನ್ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ.