ಮಮ್ಮೂಟ್ಟಿ, ಮೋಹನ್ ಲಾಲ್​ 
ಮಾಲಿವುಡ್

‘ಪೇಟ್ರಿಯಟ್’ ಚಿತ್ರದಲ್ಲಿ ಮೋಹನ್‌ಲಾಲ್, ಮಮ್ಮೂಟ್ಟಿ ಜತೆ ಮಲಯಾಳಂ ಕಲಾವಿದರ ಸಂಗಮ

ಪ್ರಮುಖ ಮುಖ್ಯಾಂಶಗಳು

  • 13 ವರ್ಷಗಳ ಬಳಿಕ ಒಂದಾದ ಮಲಯಾಳಂ ದಿಗ್ಗಜ ಕಲಾವಿದರು
  • ಪೇಟ್ರಿಯಟ್​ ಆ್ಯಕ್ಷನ್​ ಟ್ರೇಲರ್ ಮಿಂಚಿದ ಮೋಹನ್​ ಲಾಲ್​- ಮಮ್ಮೂಟ್ಟಿ
  • ಮೇ 1ಕ್ಕೆ ಸಿನಿಮಾ ತೆರೆಗೆ
ಮಲಯಾಳಂ ಚಿತ್ರರಂಗದ ದಿಗ್ಗಜ ಕಲಾವಿದರಾದ ಮೋಹನ್‌ಲಾಲ್ ಮತ್ತು ಮಮ್ಮೂಟ್ಟಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮಲಯಾಳಂನ ‘ಪಾವಂ ಪೂರ್ಣಿಮಾ’ (1984) ಮೂಲಕ ಆರಂಭವಾದ ಇಬ್ಬರ ಜುಗಲ್‌ಬಂಧಿ ಬಳಿಕ ‘ಲಕ್ಷ್ಮಣ ರೇಖಾ ’ (1985), ‘ಮಾನುಸಿರ್’ (1985), ‘ಟ್ವೆಂಟಿ-20’ (2008) ಸೇರಿ 50 ಸಿನಿಮಾಗಳಲ್ಲಿ ಜತೆಯಾಗಿ ಅಭಿನಯಿಸಿದ್ದಾರೆ. 2013ರಲ್ಲಿ ತೆರೆಕಂಡಿದ್ದ ‘ಕಡಲ್ ಕಡನ್ನು ಒರು ಮಾತುಕುಟ್ಟಿ’ ಇಬ್ಬರು ನಟಿಸಿದ್ದ ಕೊನೆಯ ಚಿತ್ರ. ಇದಾಗಿ ಬರೋಬ್ಬರಿ 13 ವರ್ಷಗಳ ಬಳಿಕ ಮತ್ತೆ ಈ ದಿಗ್ಗಜರು ‘ಪೇಟ್ರಿಯಟ್’ ಚಿತ್ರದ ಮೂಲಕ ಒಂದಾಗಿದ್ದಾರೆ. ಮಲಯಾಳಂ ಈ ವರ್ಷದ ಬಿಗ್‌ಬಜೆಟ್ ಚಿತ್ರ ಇದಾಗಿದ್ದು, ಮೋಹನ್‌ಲಾಲ್ ಹಾಗೂ ಮಮ್ಮೂಟ್ಟಿ ಜತೆಗೆ ಕಲಾವಿದರ ದಂಡೇ ಇದ್ದು, ಈ ಕಾರಣಕ್ಕೆ ಹೆಚ್ಚು ನಿರೀಕ್ಷೆ ಮೂಡಿಸಿದೆ. ಫಹಾದ್ ಫಾಸಿಲ್, ನಯನ ತಾರಾ, ಗ್ರೇಸ್ ಆ್ಯಂಟೋನಿ, ಶಹೀನ್ ಸಿದ್ದೀಕ್, ಜರೀನ್ ಶೀಹಾಬ್, ಜೀನು ಜೋಸೆಫ್, ಪ್ರಕಾಶ್ ಬೆಳವಾಡಿ ಸೇರಿ ಹಲವರು ನಟಿಸಿದ್ದಾರೆ. ಇದೇ ಮೇ 1ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಮೂರುವರೆ ನಿಮಿಷದ ಆ್ಯಕ್ಷನ್ ಟ್ರೇಲರ್ ರಿಲೀಸ್ ಮಾಡಲಾಗಿದೆ. ಮಮ್ಮೂಟ್ಟಿ ಯಾವುದೋ ಗೌಪ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಟ್ರೇಲರ್ ಮೂಲಕ ತಿಳಿಯಬಹುದು. ಆ ಕಾರ್ಯಾಚರಣೆಗೆ ಮೋಹನ್‌ಲಾಲ್ ಕೂಡ ಕೈಜೋಡಿಸಲಿದ್ದು, ಇಬ್ಬರು ಸೇರಿ ಶತ್ರುಗಳನ್ನು ಸೆದೆಬಡಿಯುವ ಅಂಶಗಳಿವೆ, ಟ್ರೇಲರ್ ಕೊನೆಯಲ್ಲಿ ಮಮ್ಮುಟ್ಟಿಗೆ ಒಬ್ಬ ‘ನೀವು ಪೊಲೀಸ್ಸಾ? ಟೆರರಿಸ್ಟ್ ? ಎಂದು ಕೇಳಿದಾಗ ‘ಪೇಟ್ರಿಯಟ್’ ಎನ್ನುವ ಮಾತು ಗಮನಸೆಳೆಯುತ್ತದೆ. ಇಡೀ ಟ್ರೇಲರ್‌ನಲ್ಲಿ ಆ್ಯಕ್ಷನ್ ಅಬ್ಬರ ಕಾಣಬಹುದು. -ಏಜೆನ್ಸೀಸ್