Meera Vasudevan - ಸಿನಿಮಾ ತಾರೆಯರ ಜೀವನ ಕೆಲವೊಮ್ಮೆ ಯಾವ ಚಿತ್ರಕ್ಕೂ ಕಡಿಮೆ ಇಲ್ಲ ಎಂಬಂತೆ ಟ್ವಿಸ್ಟ್ಗಳಿಂದ ಕೂಡಿರುತ್ತದೆ. ಅದರಲ್ಲೂ ಅವರ ಪ್ರೀತಿ, ಮದುವೆ, ಬ್ರೇಕಪ್, ವಿಚ್ಛೇದನದ ಕಥೆಗಳಂತೂ ಎಂತಹ ಥ್ರಿಲ್ಲರ್ಗಳನ್ನೂ ಮೀರಿಸುವಂತಿರುತ್ತವೆ. ಈಗೇಕೆ ಮದುವೆ ಕಹಾನಿ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣ, ರಾಜ್ಯಪ್ರಶಸ್ತಿ ಮಲಯಾಳಂ ನಟಿ ಮೀರಾ ವಾಸುದೇವನ್.
ಹೌದು, ಮೀರಾ ಇತ್ತೀಚೆಗಷ್ಟೆ ಮೂರನೇ ಪತಿ ಛಾಯಾಗ್ರಾಹಕ ವಿಪಿನ್ರಿಂದ ದೂರವಾಗಿದ್ದಾರೆ. ಈ ಬಗ್ಗೆ ಖುದ್ದು ಅವರೇ ಜಾಲತಾಣದಲ್ಲಿ, "ನಾನು ನಟಿ ಮೀರಾ ವಾಸುದೇವನ್ ಇದೇ ಆಗಸ್ಟ್ 2025ರಿಂದ ನಾನು ಮತ್ತೆ ಒಂಟಿಯಾಗಿದ್ದೇನೆ ಎಂದು ಅಧಿಕೃತವಾಗಿ ತಿಳಿಸುತ್ತಿದ್ದೇನೆ. ಸದ್ಯ ನಾನು ನನ್ನ ಬದುಕಿನ ಅದ್ಭುತ ಮತ್ತು ಶಾಂತಿಯುತ ಘಟ್ಟದಲ್ಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಅವರ ಪತಿ ವಿಪಿನ್ ಮೌನವಹಿಸಿದ್ದಾರೆ.
40ಕ್ಕೂ ಅಧಿಕ ಸಿನಿಮಾಗಳು, 25ಕ್ಕೂ ಹೆಚ್ಚು ರಿಯಾಲಿಟಿ ಶೋ, ಧಾರಾವಾಹಿ, ಸರಣಿಗಳಲ್ಲಿ ನಟಿಸಿರುವ 43 ವರ್ಷದ ಮೀರಾಗೆ ಈಗ ಮುರಿದುಬಿದ್ದಿರುವುದು ಮೂರನೇ ಮದುವೆ. 2005ರಲ್ಲಿ ಛಾಯಾಗ್ರಾಹಕ ವಿಶಾಲ್ ಅಗರ್ವಾಲ್ ಜತೆ ಸಪ್ತಪದಿ ಇಟ್ಟಿದ್ದ ಮೀರಾ, 2010ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು.
ಬಳಿಕ 2012ರಲ್ಲಿ "ಕೆಜಿಎಫ್' ಸೇರಿ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿರುವ ಜಾನ್ ಕೊಕ್ಕೇನ್ ಜತೆ ಮೀರಾ ಮದುವೆಯಾದರು. ಆದರೆ, ಅವರಿಂದಲೂ 2016ರಲ್ಲಿ ದೂರವಾದರು. ನಂತರ ಕಳೆದ ವರ್ಷವಷ್ಟೇ ವಿಪಿನ್ರನ್ನು ವರಿಸಿದ್ದ ಮೀರಾ ಇದೀಗ ಕೇವಲ ಒಂದೇ ವರ್ಷದಲ್ಲಿ ಅವರಿಂದಲೂ ವಿಚ್ಛೇದನ ಪಡೆದಿದ್ದಾರೆ.