ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ(Malayalam Actress) ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್ (Manju Warrier) ಅವರಿಗೆ ವಿಚಿತ್ರ ಅನುಭವವೊಂದು ಎದುರಾಗಿದೆ. ಕಾರ್ಯಕ್ರಮದ ವೇದಿಕೆಯ ಮೇಲೆ ಮಹಿಳಾ ಅಭಿಮಾನಿಯೊಬ್ಬರು ನಟಿಗೆ ಬಲವಂತವಾಗಿ ಮುತ್ತು ನೀಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವೇದಿಕೆಯಲ್ಲೇ ನಡೆದ ಘಟನೆ
ಪಾಲಕ್ಕಾಡ್‌ನಲ್ಲಿ ನಡೆದ ಸಮಾರಂಭವೊಂದಕ್ಕೆ ಮಂಜು ವಾರಿಯರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಬಂದ ಮಹಿಳಾ ಅಭಿಮಾನಿಯೊಬ್ಬರು ನಟಿಯ ಹತ್ತಿರ ಬಂದು ಅನಿರೀಕ್ಷಿತವಾಗಿ ಮುತ್ತು ನೀಡಿದ್ದಾರೆ. ಈ ವರ್ತನೆಯಿಂದ ನೆರೆದಿದ್ದವರು ಮತ್ತು ವೇದಿಕೆಯಲ್ಲಿದ್ದ ನಿರೂಪಕಿ ಶಾಕ್ ಆಗಿದ್ದಾರೆ. ತಕ್ಷಣವೇ ನಿರೂಪಕಿ ಆ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, "ಇದು ಸರಿಯಾದ ವರ್ತನೆಯಲ್ಲ, ಇಂತಹ ನಡೆ ಅಸಹ್ಯಕರ" ಎಂದು ವೇದಿಕೆಯಲ್ಲೇ ಖಂಡಿಸಿದರು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಅಭಿಮಾನಿ, "ನನಗೆ ಮಂಜು ಅಕ್ಕ ಎಂದರೆ ತುಂಬಾ ಪ್ರೀತಿ, ಆ ಪ್ರೀತಿಯಿಂದಲೇ ನಾನು ಅವರಿಗೆ ಮುತ್ತು ನೀಡಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.
ಲೇಡಿ ಸೂಪರ್ ಸ್ಟಾರ್
ಇಂತಹ ಅನಿರೀಕ್ಷಿತ ಘಟನೆಯಿಂದ ಸ್ವಲ್ಪ ಮುಜುಗರ ಅನುಭವಿಸಿದರೂ, ಮಂಜು ವಾರಿಯರ್ ಎಲ್ಲಿಯೂ ತಮ್ಮ ತಾಳ್ಮೆ ಕಳೆದುಕೊಳ್ಳಲಿಲ್ಲ. ಮಹಿಳಾ ಅಭಿಮಾನಿಯ ವರ್ತನೆಯನ್ನು ಸಮಾಧಾನದಿಂದಲೇ ಸ್ವೀಕರಿಸಿದ ಅವರು, ಬಳಿಕ ಅಲ್ಲಿ ನೆರೆದಿದ್ದ ಇತರ ಅಭಿಮಾನಿಗಳೊಂದಿಗೆ ನಗುನಗುತ್ತಾ ಮಾತನಾಡಿದರು. ಅಷ್ಟೇ ಅಲ್ಲದೆ, ಎಲ್ಲರ ಜೊತೆ ಫೋಟೋ ಮತ್ತು ಸೆಲ್ಫಿಗಳಿಗೆ ಪೋಸ್ ನೀಡುವ ಮೂಲಕ ತಮ್ಮ ದೊಡ್ಡಗುಣವನ್ನು ಮೆರೆದಿದ್ದಾರೆ.
ಪ್ರತಿಭೆಗಳ ಗಣಿ ಮಂಜು ವಾರಿಯರ್
ಮಂಜು ವಾರಿಯರ್ ಕೇವಲ ನಟಿಯಷ್ಟೇ ಅಲ್ಲ, ಅವರು ಅದ್ಭುತ ನೃತ್ಯಗಾರ್ತಿ, ಬರಹಗಾರ್ತಿ, ನಿರ್ಮಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಹೌದು. 'ಸಾಕ್ಷ್ಯಂ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, 'ಈ ಪುಳಯುಂ ಕಡನ್ನು', 'ಅಸುರನ್', 'ಪತ್ರಂ' ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಬಿಡುಗಡೆಯಾದ 'ಕಣ್ಣೆಳುತಿ ಪೊಟ್ಟುಂ ತೊಟ್ಟು' ಚಿತ್ರದ ಅಭಿನಯಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಸೆಕೆಂಡ್ ಇನ್ನಿಂಗ್ಸ್: ಸಿನಿಮಾದಿಂದ ಸುದೀರ್ಘ ವಿರಾಮ ಪಡೆದಿದ್ದ ಮಂಜು, 'ಹೌ ಓಲ್ಡ್ ಆರ್ ಯು?' ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಇತ್ತೀಚೆಗೆ ಅವರು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ 'L2: ಎಂಪುರಾನ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).