Monalisa Bhosale (ಚಿತ್ರ Instagram)
- 2025ರ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ತಮ್ಮ ಕಣ್ಣುಗಳಿಂದಲೇ ಗಮನ ಸೆಳೆದ ಮೊನಾಲಿಸಾ ಬೋಸ್ಲೆ
- ಮೊನಾಲಿಸಾ ಮಹಾರಾಷ್ಟ್ರದ ಫರ್ಮಾನ್ ಅವರನ್ನು ಫೇಸ್ಬುಕ್ ಮೂಲಕ ಭೇಟಿಯಾದರು
- ಜೋಡಿ ಬೇರೆ ಬೇರೆ ಧರ್ಮಕ್ಕೆ ಸೇರಿದ ಹಿನ್ನಲೆ ಅವರ ತಂದೆ ಜೈ ಸಿಂಗ್ ಭೋಸ್ಲೆ ವಿರೋಧ ವ್ಯಕ್ತ
ತಿರುವನಂತಪುರಂ: 2025ರ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ತಮ್ಮ ಕಣ್ಣುಗಳಿಂದಲೇ ಗಮನ ಸೆಳೆದ ಮೊನಾಲಿಸಾ ಬೋಸ್ಲೆ (Monalisa Bhosale) ಮಂಗಳವಾರ (ಮಾ. 11) ಕೇರಳದ ತಿರುವನಂತಪುರಂ ನೈನಾರ್ ದೇವಸ್ಥಾನದಲ್ಲಿ ತನ್ನ ಗೆಳೆಯ ಫರ್ಮಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವರದಿಗಳ ಪ್ರಕಾರ, ಮಧ್ಯಪ್ರದೇಶದ ಇಂದೋರ್‌ನ ಮೊನಾಲಿಸಾ ಮಹಾರಾಷ್ಟ್ರದ ಫರ್ಮಾನ್ ಅವರನ್ನು ಫೇಸ್ಬುಕ್ ಮೂಲಕ ಭೇಟಿಯಾದರು. ಆದಾಗ್ಯೂ, ಈ ಜೋಡಿ ವಿಭಿನ್ನ ಧರ್ಮಕ್ಕೆ ಸೇರಿದ ಹಿನ್ನಲೆ ಅವರ ತಂದೆ ಜೈ ಸಿಂಗ್ ಭೋಸ್ಲೆ ವಿರೋಧ ವ್ಯಕ್ತಪಡಿಸಿ, ದೂರದ ಸಂಬಂಧಿಯೊಂದಿಗೆ ಮದುವೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಮೊನಾಲಿಸಾ ಆರೋಪಿಸಿದ್ದಾರೆ.
ಇತ್ತೀಚೆಗೆ ಪೂವಾರ್‌ನಲ್ಲಿ ತನ್ನ ಚೊಚ್ಚಲ ಮಲಯಾಳಂ ಚಿತ್ರ 'ನಾಗಮ್ಮ' ಚಿತ್ರೀಕರಣದಲ್ಲಿದ್ದಾಗ ಮೊನಾಲಿಸಾ ತಂದೆ ಬಲವಂತವಾಗಿ ತಮ್ಮ ಊರಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಘಟನೆಯ ನಂತರ ರಕ್ಷಣೆಗಾಗಿ ಮೊನಾಲಿಸಾ ಪೊಲೀಸರ ಮೊರೆ ಹೋಗಿದ್ದಾಳೆ. ಈ ವೇಳೆ ಜೈ ಸಿಂಗ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮಗಳು ಯಾರೊಂದಿಗೆ ಬದುಕಬೇಕು ಎಂದು ನಿರ್ಧರಿಸುವ ಹಕ್ಕು ಆಕೆಗೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಿಂದ ನೇರವಾಗಿ ಮೊನಾಲಿಸಾ ತನ್ನ ಸಂಗಾತಿಯೊಂದಿಗೆ ತಿರುವನಂತಪುರಂ ನೈನಾರ್ ದೇವಸ್ಥಾನಕ್ಕೆ ಹೋಗಿ ಅಲ್ಲಿ ವಿವಾಹವಾದರು. ದಂಪತಿಗೆ ಬೆಂಬಲ ನೀಡಲು ಕೇರಳದ ಹಲವಾರು ಪ್ರಮುಖ ನಾಯಕರು ಹಾಜರಿದ್ದರು. ಇವರು ಈ ವಿವಾಹವನ್ನು "ಕೇರಳದ ನಿಜವಾದ ಕಥೆ" ಎಂದು ಬಣ್ಣಿಸಿದರು.
2025ರ ಮಹಾಕುಂಭ ಮೇಳದ ಸಂದರ್ಭದಲ್ಲಿ ಮೊನಾಲಿಸಾ ಭೋಸ್ಲೆ ರುದ್ರಾಕ್ಷಿ ಮತ್ತು ಹೂಮಾಲೆಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತು.
ಅವರ ಅಪರೂಪದ ಕಿತ್ತಳೆ ಬಣ್ಣದ ಕಣ್ಣುಗಳು ಮತ್ತು ಅವರ ಮುಖದ ಮೇಲಿನ ಪ್ರಕಾಶಮಾನವಾದ ನಗು ನೆಟ್ಟಿಗರ ಗಮನ ಸೆಳೆಯಿತು. ಲಿಯೊನಾರ್ಡೊ ಡಾ ವಿಂಚಿಯ ಪ್ರಸಿದ್ಧ ಚಿತ್ರ 'ಮೊನಾಲಿಸಾ'ಳಂತೆ ಇವರ ನಗು ಮತ್ತು ಕಣ್ಣುಗಳು ಆಕರ್ಷಕವಾಗಿದ್ದರಿಂದ ಜನ ಇವರನ್ನು ಪ್ರೀತಿಯಿಂದ "ಮೊನಾಲಿಸಾ" ಎಂದೇ ಕರೆಯಲಾರಂಭಿಸಿದರು.
ಪ್ರಸ್ತುತ ಮೊನಾಲಿಸಾ ಪಿ. ಬಿನು ವರ್ಗೀಸ್ ಅವರ 'ನಾಗಮ್ಮ' ಚಿತ್ರದ ಮೂಲಕ ನಟ ಕೈಲಾಶ್ ಅವರೊಂದಿಗೆ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ. ಸನೋಜ್ ಮಿಶ್ರಾ ಅವರ ಮುಂಬರುವ ಚಿತ್ರ ' ದಿ ಡೈರಿ ಆಫ್ ಮಣಿಪುರ್ ' ನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಅವರು ಸಜ್ಜಾಗಿದ್ದಾರೆ (ಏಜೆನ್ಸೀಸ್).