Dileep (instagram ನಿಂದ ಫೋಟೋ ತೆಗೆದುಕೊಳ್ಳಲಾಗಿದೆ)
ತಿರುವನಂತಪುರಂ: 2017 ರಲ್ಲಿ ಮಲಯಾಳಂ ನಟಿಯ ಅಪಹರಣ ಮತ್ತು ಹಲ್ಲೆ ಪ್ರಕರಣ ಅಂತಿಮ ಹಂತಕ್ಕೆ ತಲುಪಿದ್ದು, ಡಿಸೆಂಬರ್ 8 ರಂದು ತೀರ್ಪು ಹೊರಬೀಳಲಿದೆ ಎಂದು ಕೇರಳ ನ್ಯಾಯಾಲಯ ತಿಳಿಸಿದೆ. (actor Dileep) ನಟ ದಿಲೀಪ್ ಕೂಡ 10 ಆರೋಪಿಗಳಲ್ಲೊಬ್ಬರು ಎನ್ನಲಾಗಿದೆ.
ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಸುತ್ತಿನ ಮೊಕದ್ದಮೆಗಳನ್ನು ಎದುರಿಸಿದ ನಂತರ ಸುದೀರ್ಘ ವಿಚಾರಣೆ ಮುಕ್ತಾಯಗೊಂಡಿದೆ. ಇನ್ನು ಈ ಪ್ರಕರಣವು ಸಾಕ್ಷಿಗಳನ್ನು ನಾಶಪಡಿಸುವುದು, ಜಾಮೀನು ರದ್ದು ಮಾಡುವುದು ಹಾಗೂ ವಿಚಾರಣೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬದ ಬಗ್ಗೆ ವಾದ-ವಿವಾದಗಳನ್ನು ವಿವರಿಸಿದೆ.
ಪ್ರಕರಣ ಏನು?
ಫೆಬ್ರವರಿ 17, 2017 ರಂದು ದಕ್ಷಿಣ ಭಾರತದ ನಟಿಯನ್ನು ಅಪಹರಣ ಮಾಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಹಾಗೂ ಕೊಚ್ಚಿಯ ಹೊರವಲಯಕ್ಕೆ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ 2 ಗಂಟೆಗಳ ಕಾಲ ಹಲ್ಲೆ ಮಾಡಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಚಿತ್ರೀಕರಿಸಿ ಆಕೆಗೆ ಬ್ಲಾಕ್ಮೇಲ್ ಮಾಡುವ ಉದ್ದೇಶವನ್ನು ಆರೋಪಿಗಳು ಹೊಂದಿದ್ದರು ಎನ್ನಲಾಗಿದೆ.
ಅಪರಾಧದಲ್ಲಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಕೇರಳ ಪೊಲೀಸರು ಜುಲೈ 2017 ರಲ್ಲಿ ದಿಲೀಪ್ ಅವರನ್ನು ಬಂಧಿಸಿ, 88 ದಿನಗಳ ಕಾಲ ಅವರನ್ನು ಕಸ್ಟಡಿಯಲ್ಲಿರಿಸಿದ್ದರು. ಇದಾದ ಬಳಿಕ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿತು.
ಪ್ರಮುಖ ಆರೋಪಿ ಸುನಿಲ್, ದಿಲೀಪ್ ಸೇರಿದಂತೆ ಇತರ ಎಲ್ಲಾ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಮಾಹಿತಿ ಬಂದಿದೆ.
2019 ರಲ್ಲಿ, ಸುಪ್ರೀಂ ಕೋರ್ಟ್ ದಿಲೀಪ್ ಅವರ ಹಲ್ಲೆಯ ದೃಶ್ಯಗಳನ್ನು ಹೊಂದಿರುವ ಮೆಮೊರಿ ಕಾರ್ಡ್ನ ಪ್ರತಿಯನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು. ಇನ್ನು ಜನವರಿ 31, 2023 ರೊಳಗೆ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿತು. ನಂತರ ಸುಪ್ರೀಂ ಕೋರ್ಟ್ ಮಾರ್ಚ್ 31, 2024 ರವರೆಗೆ ಸಮಯವನ್ನು ನೀಡಿತು.
ಈ ವರ್ಷದ ಆಗಸ್ಟ್‌ನಲ್ಲಿ, ಪತ್ರಕರ್ತರೊಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ, ಕೇರಳ ಹೈಕೋರ್ಟ್ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದೆ (ಏಜೆನ್ಸೀಸ್).