Jananayagan (ಚಿತ್ರ X) 
ಮಾಲಿವುಡ್

ಜನನಾಯಗನ್​ ಚಿತ್ರಕ್ಕೆ ಪೈರಸಿ ಕಾಟ..ಅಕ್ರಮವಾಗಿ ಸಿನಿಮಾ ಪ್ರಸಾರ ಮಾಡಿದ ಕೇಬಲ್ ಟಿವಿ ಮಾಲೀಕ ಅಂದರ್​! Jananayagan

ಕೊಯಮತ್ತೂರು: ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜನನಾಯಗನ್' (Jananayagan) ಅಕ್ರಮವಾಗಿ ರಾಶಿ ಪ್ರೈಮ್ ಮೂವಿ ಎಂಬ ಸ್ಥಳೀಯ ಚಾನೆಲ್​ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಮಾಲೀಕ ಎಸ್. ಪಳನಿಸ್ವಾಮಿ (44) ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಅನುಮೋದನೆಗಾಗಿ ಕಾಯುತ್ತಿರುವ ಈ ಚಿತ್ರವನ್ನು ಏಪ್ರಿಲ್ 11 ರಂದು ಪಳನಿಸ್ವಾಮಿ ಒಡೆತನದ ಚಾನಲ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಆದಾಗ್ಯೂ, ಈ ಚಿತ್ರ ಅಧೀಕೃತವಾಗಿ ಚಿತ್ರಮಂದಿರಗಳಲ್ಲಿ ಅಥವಾ ಇತರ ವೇದಿಕೆಗಳಲ್ಲಿ ಬಿಡುಗಡೆಯಾಗಿಲ್ಲ. 
ಟಿವಿಕೆ ಕೊಯಮತ್ತೂರು ಪೂರ್ವ ಘಟಕದ ಉಪ ಕಾರ್ಯದರ್ಶಿ ಮೋಹನ ಪ್ರಿಯಾ ಸಲ್ಲಿಸಿದ ದೂರಿನ ಆಧಾರದ ಮೇಲೆ ಕೊಯಮತ್ತೂರು ಎಸ್ಪಿ ಕೆ. ಕಾರ್ತಿಕೇಯನ್​ ತನಿಖೆ ನಡೆಸಲು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಈ ವೇಳೆ ಚಿತ್ರದ ಪ್ರತಿಯನ್ನು ಅಕ್ರಮವಾಗಿ ಪಡೆದು ಸಾರ್ವಜನಿಕರಿಗೆ ಪ್ರದರ್ಶಿಸಲಾಗಿದೆ ಎಂಬುದನ್ನು ಪೊಲೀಸರು ಅರಿತುಕೊಂಡರು. 
ಬಿಡುಗಡೆಗೂ ಮುನ್ನ ಚಾನಲ್​​ನಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಪಳನಿಸ್ವಾಮಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಪ್ರಸಾರದ ಸಮಯದಲ್ಲಿ ಬಳಸಲಾದ ಕಂಪ್ಯೂಟರ್ ಮತ್ತು ಐದು ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಂಡು ಚಾನೆಲ್​ ಕಚೇರಿಯನ್ನು ಮುಚ್ಚಲಾಯಿತು. 

HD ಪ್ರಿಂಟ್ ಸೋರಿಕೆಯಾಗಿದೆ

ಏಪ್ರಿಲ್ 9 ರಂದು ಚಿತ್ರದ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದವು. ಇದಾದ ಬಳಿಕ ಚಿತ್ರದ ಸಂಪೂರ್ಣ HD ಮುದ್ರಣವು ಅಂತರ್ಜಾಲದಲ್ಲಿ ಸೋರಿಕೆಯಾಯಿತು. ಆದಾಗ್ಯೂ, ಸೆನ್ಸಾರ್​ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಚಿತ್ರ ಹೇಗೆ ಸೋರಿಕೆಯಾಯಿತು ಎಂಬುದು ಸದ್ಯ ಚಿತ್ರರಂಗದಲ್ಲಿ ಗೊಂದಲಕ್ಕೊಳಗಾಗಿದೆ. ಈ ಘಟನೆ ನಡೆದ ನಂತರ ಅನೇಕ ನಾಯಕರು ಪೈರಸಿ ವಿರುದ್ಧ ಕಿಡಿಕಾರಿದರು. 
ದೂರಿನ ನಂತರ, ತಮಿಳುನಾಡು ಸೈಬರ್ ಕ್ರೈಮ್ ವಿಂಗ್ ಆರು ಜನರನ್ನು ಬಂಧಿಸಿದ್ದು, ಸುಮಾರು 300 ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ತೆಗೆದುಹಾಕಿದೆ. ಎಚ್. ವಿನೋದ್ ನಿರ್ದೇಶನದ 'ಜನನಾಯಕನ್' ವಿಜಯ್ ಅವರ ನಟನಾ ವೃತ್ತಿಜೀವನದ ಕೊನೆಯ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಗೌತಮ್ ಮೆನನ್ ಮತ್ತು ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವಿದೆ (ಏಜೆನ್ಸೀಸ್​).