2025ರ ಅತಿದೊಡ್ಡ ಫ್ಲಾಪ್ ಸಿನಿಮಾ
- ಸಿನಿಮಾ ರಂಗ ಅಂದಮೇಲೆ ಹಿಟ್ ಹಾಗೂ ಫ್ಲಾಪ್ ಸಿನಿಮಾಗಳು ಸಾಮಾನ್ಯ
- ಸಣ್ಣ ಬಜೆಟ್‌ನಲ್ಲಿ ನಿರ್ಮಿಸಿದ ಸಿನಿಮಾಗಳು ಕೂಡ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತವೆ
- ಅದೇ ರೀತಿ ಭಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ಸಿನಿಮಾಗಳು ಮಕಾಡೆ ಮಲಗುತ್ತವೆ
- ನಾವೀಗ 2025ನೇ ವರ್ಷದ ಅತಿದೊಡ್ಡ ಫ್ಲಾಪ್ ಸಿನಿಮಾದ ಬಗ್ಗೆ ತಿಳಿದುಕೊಳ್ಳೋಣ
ನವದೆಹಲಿ: ಸಿನಿಮಾ ರಂಗ ಅಂದಮೇಲೆ ಹಿಟ್ ಹಾಗೂ ಫ್ಲಾಪ್ ಸಿನಿಮಾಗಳು ( Biggest flop ) ಸಾಮಾನ್ಯ. ಸಣ್ಣ ಬಜೆಟ್‌ನಲ್ಲಿ ನಿರ್ಮಿಸಿದ ಸಿನಿಮಾಗಳು ಕೂಡ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತವೆ. ಅದೇ ರೀತಿ ಭಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ಸಿನಿಮಾಗಳು ಮಕಾಡೆ ಮಲಗುತ್ತವೆ. ಇದೆಲ್ಲ ಪ್ರೇಕ್ಷಕರ ಅಭಿರುಚಿಯ ಮೇಲೆ ಅವಲಂಬಿತವಾಗಿರುತ್ತದೆ. ದೊಡ್ಡ ಸ್ಟಾರ್ ನಟರನ್ನು ಹಾಕಿಕೊಂಡು, ಹಣವನ್ನು ನೀರಿನಂತೆ ಖರ್ಚು ಮಾಡಿ ನಿರ್ಮಿಸಿದಂತಹ ಸಿನಿಮಾ ಒಂದು ವಾರ ಕೂಡ ಚಿತ್ರಮಂದಿರಗಳಲ್ಲಿ ಉಳಿಯದೇ ಹೋದರೆ, ಅದು ಇಡೀ ಚಿತ್ರತಂಡಕ್ಕೆ ಆಗುವ ದೊಡ್ಡ ಅವಮಾನ ಎಂದರೆ ತಪ್ಪಾಗಲಾರದು.
ನಾವೀಗ 2025ನೇ ವರ್ಷದ ಅತಿದೊಡ್ಡ ಫ್ಲಾಪ್ ಸಿನಿಮಾದ ಬಗ್ಗೆ ತಿಳಿದುಕೊಳ್ಳೋಣ. ಈ ಸಿನಿಮಾ, ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾವೆಂಬ ಅಪಖ್ಯಾತಿಗೆ ಗುರಿಯಾಗಿದೆ. ಈ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಚಂಡಮಾರುತ ಸೃಷ್ಟಿಸಿ, ಸ್ಟಾರ್ ನಟನಿಗೆ ಹ್ಯಾಟ್ರಿಕ್ ಸಿನಿಮಾ ಆಗುತ್ತದೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ, ಈ ಸಿನಿಮಾ ಎಷ್ಟರಮಟ್ಟಿಗೆ ಸೋಲುಂಡಿದೆ ಅಂದರೆ, ಬಿಡುಗಡೆಯಾದ ಕೇವಲ 6 ದಿನದಲ್ಲಿ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕಣ್ಮರೆಯಾಗಿದೆ.
ಅಂದಹಾಗೆ, ಈವರೆಗೂ ನಾವು ಮಾತನಾಡಿದ್ದು ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ನಟನೆಯ ವೃಷಭ ಚಿತ್ರದ ಬಗ್ಗೆ. ಈ ಸಿನಿಮಾ 2025ನೇ ಸಾಲಿನ ಅತಿದೊಡ್ಡ ಫ್ಲಾಪ್ ಸಿನಿಮಾ ಎಂಬ ಅಪಖ್ಯಾತಿ ಗಳಿಸಿದೆ. ಗಮನಾರ್ಹ ಸಂಗತಿ ಏನೆಂದರೆ, 2025ನೇ ವರ್ಷ ಮೋಹನ್ಲಾಲ್ ಅವರ ಪಾಲಿಗೆ ಚಿನ್ನದ ವರ್ಷ ಎನ್ನಬಹುದು. ಏಕೆಂದರೆ, ಅವರ ನಟನೆಯ ಥುಡರಂ ಮತ್ತು ಎಲ್2 ಎಂಪುರಾನ್ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದವು. ವೃಷಭ ಸಿನಿಮಾ ಮೂಲಕ ಹ್ಯಾಟ್ರಿಕ್ ಕನಸು ಕಂಡಿದ್ದರು. ಆದರೆ, ಈ ಸಿನಿಮಾವನ್ನು ಸಿನಿ ಪ್ರೇಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರ ಪರಿಣಾಮ ನಿರ್ಮಾಪಕರಿಗೆ ಶೇ. 97 ರಷ್ಟು ನಷ್ಟವಾಗಿದೆ.
ಬಜೆಟ್ ಎಷ್ಟು?
ಮಲಯಾಳಂನ ಎಪಿಕ್ ಡ್ರಾಮಾ ವೃಷಭ, 2025, ಡಿಸೆಂಬರ್ 25ರಂದು ಬಿಡುಗಡೆಯಾಯಿತು. ಈ ಸಿನಿಮಾ ಮೊದಲ ದಿನವೇ 60 ಲಕ್ಷ ರೂ. ಸಂಗ್ರಹ ಮಾಡಿತು. ಸಿನಿಮಾ ಬಗ್ಗೆ ಎಲ್ಲೆಡೆ ನೆಗೆಟಿವ್ ಅಭಿಪ್ರಾಯಗಳು ಬಂದಿದ್ದರಿಂದ ಎರಡನೇ ದಿನಕ್ಕೆ ಬಾಕ್ಸ್ಆಫೀಸ್ ಸಂಗ್ರಹ ಸೇತುವೆ ಕುಸಿದಂತೆ ಕುಸಿಯಿತು. ಅಂದಿನಿಂದ ಈ ಸಿನಿಮಾ ಮೇಲೇರಲೇ ಇಲ್ಲ. 6ನೇ ದಿನದ ಹೊತ್ತಿಗೆ ಈ ಚಿತ್ರವು ಭಾರತದಲ್ಲಿ ಕೇವಲ 1.5 ಕೋಟಿ ರೂ. ಮಾತ್ರ ಗಳಿಸಿದೆ. ಇನ್ನು ವಿದೇಶಗಳಲ್ಲಿ ಕೇವಲ 30 ಸಾವಿರ ಡಾಲರ್ ಮಾತ್ರ ಗಳಿಸಿದೆ. ಬರೋಬ್ಬರಿ 70 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ ಕೇವಲ 2 ಕೋಟಿ ರೂ. ಗಳಿಸಲು ಸಾಧ್ಯವಾಗಿದ್ದು, ಬಜೆಟ್‌ನ ಶೇ. 97% ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.
ಅಂದಹಾಗೆ, ಮೋಹನ್ ಲಾಲ್ರಂಥ ಸ್ಟಾರ್ ನಟರಿದ್ದರೂ ಈ ಸಿನಿಮಾ ವಿಫಲವಾಗಿದೆ. ಆರಂಭದಲ್ಲಿ ಕುಸಿದ ಈ ಸಿನಿಮಾ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಹೀಗಾಗಿ, ಕೇರಳದ ಅನೇಕ ಚಿತ್ರಮಂದಿರಗಳು ತಮ್ಮ ನಷ್ಟವನ್ನು ತಡೆಯಲು ಮಂಗಳವಾರವೇ ಈ ಚಿತ್ರವನ್ನು ಸ್ಥಗಿತಗೊಳಿಸಿದವು. ದುಃಖಕರ ಸಂಗತಿ ಏನೆಂದರೆ, ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಂದು ವಾರವನ್ನು ಸಹ ಪೂರ್ಣಗೊಳಿಸಲಿಲ್ಲ. ಇದೇ ಟ್ರೆಂಡ್ ಮುಂದುವರಿದರೆ ವೃಷಭ ಸಿನಿಮಾ ತನ್ನ ಲೈಫ್ಟೈಮ್ ಕಲೆಕ್ಷನ್ ಅನ್ನು 5 ರಿಂದ 7 ಕೋಟಿ ಒಳಗೆ ಮುಗಿಸಲಿದೆ. ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಕನ್ನಡದ ಸ್ಟಾರ್ ಡೈರೆಕ್ಟರ್ ನಂದಕಿಶೋರ್, (ಏಜೆನ್ಸೀಸ್).