ಮಲಯಾಳಂ ನಟಿ ಆವಂತಿಕಾ ಮೋಹನ್
- ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ
- ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ
- ಒಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್‌ಗಳಿಗೆ ಅಲ್ಲಿಯೇ ತಕ್ಕ ಉತ್ತರ ನೀಡುತ್ತಾರೆ
- ಅದೇ ರೀತಿಯ ಕೆಟ್ಟ ಕಾಮೆಂಟ್‌ಗಳಿಗೆ ಇದೀಗ ನಟಿ ಆವಂತಿಕಾ ಮೋಹನ್ ಉತ್ತರ ನೀಡಿದ್ದಾರೆ
Avantika Mohan : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್‌ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಇದೀಗ ಅದೇ ರೀತಿಯ ಕಾಮೆಂಟ್ಗೆ ನಟಿ ಆವಂತಿಕಾ ಮೋಹನ್ ಉತ್ತರ ನೀಡಿದ್ದಾರೆ.
ಯಾರು ಈ ಆವಂತಿಕಾ?
ಆವಂತಿಕಾ ಅವರು ಮಲಯಾಳಂ ಸಿನಿ ರಂಗದ ಕಲಾವಿದೆ. ಯಕ್ಷಿ, ನೀಲಕಾಶಂ ಪಚಕದಲ್ ಚುವನ್ನ ಭೂಮಿ ಮತ್ತು ಫೇಯ್ತ್‌ಫುಲ್ಲಿ ಯುವರ್ಸ್‌ನಂತಹ ಸಿನಿಮಾಗಳು ಹಾಗೂ ಜನಪ್ರಿಯ ಧಾರಾವಾಹಿಗಳ ಮೂಲಕ ನಟಿ ಅವಂತಿಕಾ ಮೋಹನ್ ಮಲಯಾಳಿಗಳಿಗೆ ಚಿರಪರಿಚಿತರಾಗಿದ್ದಾರೆ. ಆವಂತಿಕಾ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.
ಹುಡುಗರಿಂದ ಪ್ರೇಮ ನಿವೇದನೆ
ಸಾಮಾಜಿಕ ಜಾಲತಾಣದಲ್ಲಿ ತಮಗೆ ನಿತ್ಯವೂ ಬರುವ ಮಿತಿ ಮೀರಿದ ಕಾಮೆಂಟ್‌ಗಳಿಗೆ ಖಡಕ್ ಉತ್ತರಗಳನ್ನು ನೀಡುವುದರಲ್ಲಿ ಆವಂತಿಕಾ ಎಂದಿಗೂ ಹಿಂಜರಿಯುವುದಿಲ್ಲ. ಇದೀಗ, ತಮಗೆ ಪ್ರಪೋಸ್ ಮಾಡಲು ಬಂದ ಕೆಲವು ಹದಿಹರೆಯದ ಅಭಿಮಾನಿಗಳಿಗೆ ಅವಂತಿಕಾ ಅವರು ನೀಡಿರುವ ಉತ್ತರಗಳು ಇನ್‌ಸ್ಟಾಗ್ರಾಂನಲ್ಲಿ ಭಾರಿ ಸದ್ದು ಮಾಡುತ್ತಿವೆ. ತನ್ನನ್ನು ಮದುವೆಯಾಗುವಂತೆ ಕೆಲ ಹುಡುಗರು ಆವಂತಿಕಾ ಬಳಿ ಕೇಳುತ್ತಾರೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಆವಂತಿಕಾ, ನೀವು ಇಪ್ಪತ್ತರ ದಶಕದ ಆರಂಭದ ಯುವಕನಂತೆ ಕಾಣುತ್ತೀರಿ. ನೀವು ಈ ರೀತಿ ಕೇಳಲು ಇದು ಸರಿಯಾದ ಸಮಯವಲ್ಲ ಆದರೆ, ನಾನು ನಿಮ್ಮ ಆತ್ಮವಿಶ್ವಾಸವನ್ನು ಒಪ್ಪಿಕೊಳ್ಳಬೇಕು. ಸದ್ಯ, ಇದನ್ನೆಲ್ಲ ಮರೆತು ನಿಮ್ಮ ವಯಸ್ಸನ್ನು ಆನಂದಿಸಿ. ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ನಿಮ್ಮ ಜೀವನದಲ್ಲಿ ಬರುತ್ತಾರೆ ಎಂದು ಆವಂತಿಕಾ ಹೇಳಿದ್ದಾರೆ.
ಹೊಸ ನಾಯಕನ ಎಂಟ್ರಿ ಇಲ್ಲ
ಇನ್ನಿತರ ಹುಡುಗರು ಕೂಡ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದಾಗ ಅವಂತಿಕಾ ಅವರ ಉತ್ತರ ಇನ್ನಷ್ಟು ಖಾರವಾಗಿತ್ತು. ಈ ರೀತಿ ಕೇಳಲು ನಿಮಗೆ ಎಷ್ಟು ಧೈರ್ಯ? ನೀವೆಲ್ಲ ಚಿಕ್ಕ ಹುಡುಗರು ಎಂದು ತಿಳಿದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ನನ್ನ ಮಾತು ಕೇಳಿ, ನಾನು ಮದುವೆಯಾಗಿದ್ದೇನೆ. ನೀವಿನ್ನೂ ನಿಮ್ಮ ಹೋಮ್ವರ್ಕ್ ಮಾಡಿ ಓದಬೇಕಾದ ವಯಸ್ಸಿನಲ್ಲಿ ಇದ್ದೀರಿ. ನನ್ನ ಜೀವನದ ಚಿತ್ರ ಈಗಾಗಲೇ ಪೂರ್ಣಗೊಂಡಿದೆ ಮತ್ತು ಹೊಸ ನಾಯಕ ಅದರಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅವಂತಿಕಾ ಹೇಳಿದ್ದಾರೆ.
17 ವರ್ಷದ ಮತ್ತೊಬ್ಬ ಅಭಿಮಾನಿಗೆ ಓಪನ್ ಆಗಿ ಪ್ರತಿಕ್ರಿಯೆ ನೀಡಿರುವ ಆವಂತಿಕಾ, ನಾನೇನಾದರೂ ನಿನ್ನನ್ನು ಮದುವೆಯಾದರೆ, ನನಗೆ ನಾನು ನಿನ್ನ ಹೆಂಡತಿ ಅಂತ ಅನಿಸುವುದಿಲ್ಲ ಬದಲಾಗಿ, ನಿನ್ನ ತಾಯಿ ಎಂದು ಭಾವಿಸುತ್ತೇನೆ ಎಂದು ಆವಂತಿಕಾ ಹೇಳಿದ್ದಾರೆ. ಸದ್ಯ ಆವಂತಿಕಾ ಅವರ ಮಾತುಗಳು ವೈರಲ್ ಆಗಿದ್ದು, ಅನೇಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಆವಂತಿಕಾ ಅವರು ಮಕ್ಕಳಿಗೆ ಬುದ್ಧಿಮಾತುಗಳನ್ನು ಹೇಳಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ, (ಏಜೆನ್ಸೀಸ್).