ಹಿರಿಯ ನಟಿ ಊರ್ವಶಿ  
ಮಾಲಿವುಡ್

ಅದೊಂದು ಚಟದಿಂದ ಊಟ, ನಿದ್ರೆ ಬಿಟ್ಟೆ! ಮೊದಲ ಮದುವೆ ಕುರಿತು ಕಡೆಗೂ ಮೌನಮುರಿದ ಹಿರಿಯ ನಟಿ ಊರ್ವಶಿ

ಪ್ರಮುಖ ಮುಖ್ಯಾಂಶಗಳು

  • ತಮ್ಮ ಮೊದಲ ಮದುವೆ ಬಗ್ಗೆ ಬಹುಭಾಷಾ ನಟಿ ಊರ್ವಶಿ ಮಾತು
  • ಇತ್ತೀಚಿನ ಸಂದರ್ಶನದಲ್ಲಿ ಮೊದಲ ಮದುವೆ ಬಗ್ಗೆ ಮನದಾಳ
  • ಮೊದಲ ಮದುವೆಯಲ್ಲಿ ಬಿರುಕು ಮೂಡಿದ್ದೇಕೆ ಎಂಬುದನ್ನು ಬಿಚ್ಚಿಟ್ಟ ನಟಿ
ಕೇರಳ: ಸಿನಿಪ್ರಿಯರಿಗೆ ಖಂಡಿತ ಇವರಾರು ಎಂದು ಗೊತ್ತಿರುತ್ತೆ. ಹಲವು ಭಾಷೆಯ ಮತ್ತು ಕನ್ನಡ ಚಿತ್ರಗಳನ್ನು ನೋಡುವವರಿಗೆ ಈ ಹಿರಿಯ ನಟಿಯ ಪರಿಚಯವಿದೆ ಬಿಡಿ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಸಿಕರಿಂದ ಸೈಎನಿಸಿಕೊಂಡಿರುವ ಹಿರಿಯ ನಟಿ ಊರ್ವಶಿ, ಇದೀಗ ಎಷ್ಟೋ ವರ್ಷಗಳ ಬಳಿಕ ತಮ್ಮ ಮೊದಲ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಊರ್ವಶಿ, ನಂತರದಲ್ಲಿ ಸ್ಟಾರ್​ ನಟಿಯಾಗಿ ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಕನ್ನಡದಲ್ಲಿ ವಿಷ್ಣುವರ್ಧನ್​, ಅಂಬರೀಶ್​, ರವಿಚಂದ್ರನ್, ರಮೇಶ್​​ ಸೇರಿ ಹಲವು ಸ್ಟಾರ್​ ನಟರೊಂದಿಗೆ ಊರ್ವಶಿ ಅಭಿನಯಿಸಿದ್ದಾರೆ. ಇವರ 'ರಾಮ ಶಾಮ ಭಾಮಾ' ಚಿತ್ರ ಮಾತ್ರ ಇಂದಿಗೂ ಕನ್ನಡಿಗರಿಗೆ ನೆಚ್ಚಿನ ಹಾಸ್ಯ ಸಿನಿಮಾವಾಗಿ ನೆನೆಪಿನಂಗಳದಲ್ಲಿ ಉಳಿದಿದೆ. ತೆರೆ ಮೇಲೆ ನೋಡುಗರನ್ನು ಮೋಡಿ ಮಾಡಿರುವ ಈ ನಟಿಯ ಬಾಳಿನಲ್ಲಿ ಕೆಲವು ಕೆಟ್ಟ ಘಟನೆಗಳು ಕೂಡ ನಡೆದಿವೆ ಎಂಬುದಕ್ಕೆ ಅವರ ಮೊದಲ ಮದುವೆಯೇ ಸಾಕ್ಷಿ.
ಪ್ರಸ್ತುತ, ಹಿರಿಯ ನಟಿಯರ ಸಾಲಿನಲ್ಲಿರುವ ಊರ್ವಶಿ, ಈಗಲೂ ಅದೇ ಉತ್ಸಾಹದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ತಮ್ಮ ವಯಸ್ಸಿಗೆ ತಕ್ಕಂತ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅದಕ್ಕೆ ಜೀವ ತುಂಬುವ ಕೆಲಸವನ್ನು ಇಂದಿಗೂ ಅವರು ಬಿಟ್ಟಿಲ್ಲ. ವೃತ್ತಿಜೀವನದಲ್ಲಿ ಎಷ್ಟೇ ಯಶಸ್ವಿಯಾದರೂ, ತೆರೆ ಹಿಂದಿನ ಜೀವನದಲ್ಲಿ ಅನುಭವಿಸುವ ನೋವು, ದುಃಖಗಳನ್ನು ಹೇಳಿಕೊಳ್ಳುವುದು ಕಷ್ಟಸಾಧ್ಯವೇ ನಿಜ.

ನಟಿ ಮನದಾಳ...

"2000ನೇ ಇಸವಿಯಲ್ಲಿ, ನಟ ಮನೋಜ್ ಕೆ. ಜಯನ್ ಅವರ ಕೈಹಿಡಿದ ಊರ್ವಶಿಗೆ, ತೇಜ ಲಕ್ಷ್ಮಿ ಎಂಬ ಓರ್ವ ಪುತ್ರಿ ಇದ್ದಾರೆ. ಅಸಲಿಗೆ, ಇವರಿಬ್ಬರ ನಡುವಿನ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 2008ರಲ್ಲಿ ವಿಚ್ಛೇದನದ ಮೂಲಕ ಊರ್ವಶಿ ತಮ್ಮ ಪತಿಯಿಂದ ದೂರ ಸರಿದರು. ಅದಾದ ನಂತರ, 2013ರಲ್ಲಿ ಶಿವ ಪ್ರಸಾದ್ ಅವರೊಂದಿಗೆ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಓರ್ವ ಪುತ್ರನಿದ್ದಾನೆ. ಆದಾಗ್ಯೂ, ಮೊದಲ ಬಾರಿಗೆ ತಮ್ಮ ಮೊದಲ ಮದುವೆ ಮುರಿದು ಬೀಳಲು ಕಾರಣವೇನು ಎಂಬುದನ್ನು ನಟಿ ಹಂಚಿಕೊಂಡಿದ್ದಾರೆ.
"ನಾನು ಮೊದಲು ಮದುವೆಯಾಗಿ ಅತ್ತರ್ ಅವರ ಮನೆಗೆ ಬಂದಾಗ, ಅಲ್ಲಿನ ವಾತಾವರಣ ತುಂಬಾ ವಿಭಿನ್ನವಾಗಿತ್ತು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕೂತು ಕುಡಿಯುತ್ತಿದ್ದರು. ಆ ವಾತಾವರಣಕ್ಕೆ ಹೊಂದಿಕೊಳ್ಳಲು ನಾನು ಬಹಳ ಪ್ರಯತ್ನಿಸಿದೆ. ಕಡೆಗೂ ಅವರಂತೆಯೇ ಕೆಲವೊಂದಕ್ಕೆ ಒಗ್ಗಿಕೊಂಡೆ. ಮನೆಯ ಜವಾಬ್ದಾರಿ ಅದಾಗಲೇ ನನ್ನ ಹೆಗಲ ಮೇಲೆ ಬಿದ್ದಿದ್ದರಿಂದ, ನನಗೆ ಇಷ್ಟವಿಲ್ಲದ ಕೆಲಸಗಳನ್ನು ನಾನು ಮಾಡುವಂತ ಪರಿಸ್ಥಿತಿ ನಿರ್ಮಾಣವಾಯಿತು. ಯಾರೂ ನನ್ನ ಅಭಿಪ್ರಾಯವನ್ನು ಇಷ್ಟಪಡದಿದ್ದಾಗ ಮತ್ತು ಆಗಾಗ್ಗೆ ಜಗಳಗಳು ನಡೆಯುತ್ತಿದ್ದಾಗ ಕುಡಿತದ ಚಟಕ್ಕೆ ದಾಸನಾದೆ ಎಂದಿದ್ದಾರೆ.

ನಟಿಯ ಹೇಳಿಕೆ ವೈರಲ್​

ಜಟಾಪಟಿ ನಡೆದಾಗಲೆಲ್ಲ ನಾನು ಸಿಟ್ಟಿನಿಂದ ವಿಪರೀತ ಕುಡಿಯುತ್ತಿದ್ದೆ. ಈ ಚಟಕ್ಕೆ ಬಿದ್ದ ಕಾರಣ, ಊಟ ತಿನ್ನೋದು ಮತ್ತು ನಿದ್ರೆಯನ್ನೇ ತ್ಯಜಿಸಿದೆ. ಮದ್ಯ ವ್ಯಸನಿ ಆದ್ದರಿಂದ ಆರೋಗ್ಯ ತೀರ ಹದಗೆಡಲು ಶುರುವಾಯಿತು. ಆದರೆ, ನನ್ನ ಒಂದಷ್ಟು ಸ್ನೇಹಿತರು ಮತ್ತು ಒಳಿತನ್ನು ಬಯಸುವ ಹೃದಯಗಳಿಂದ ನಾನು ಈ ಚಟದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಯಿತು" ಎಂದು ಊರ್ವಶಿ ಹೇಳಿಕೊಂಡಿದ್ದಾರೆ. ನಟಿಯ ಈ ಮಾತುಗಳು ಹಲವರ ಅಚ್ಚರಿಗೆ ಕಾರಣವಾಗಿದ್ದು, ಹೇಳಿಕೆಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ,(ಏಜೆನ್ಸೀಸ್).