ಮಲಯಾಳಂ ನಟ ಸುಬೀಷ್​ ಸುಧಿ 
ಮಾಲಿವುಡ್

ಮನೆ ಹರಾಜಿಗೆ ಬಂದಿದೆ, ಸಾಲು ಸಾಲು ಫೋನ್​ ಕರೆಗಳು... 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ ಮಲಯಾಳಂ ನಟ ಕಣ್ಣೀರು

ಪ್ರಮುಖ ಮುಖ್ಯಾಂಶಗಳು

  • ನೋವನ್ನು ಸಹಿಸಲಾಗದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನ
  • ಕಷ್ಟದ ಪರಿಸ್ಥಿತಿ ನೆನೆದು ಭಾವುಕ ಪೋಸ್ಟ್​ ಹಂಚಿಕೊಂಡ ಮಲಯಾಳಂ ನಟ
ಕೇರಳ: ಸಣ್ಣ ಪಾತ್ರಗಳ ಮೂಲಕ ಮಲಯಾಳಂ ಸಿನಿಪ್ರಿಯರ ಹೃದಯದಲ್ಲಿ ಛಾಪು ಮೂಡಿಸಿರುವ ನಟ ಸುಬೀಷ್​ ಸುಧಿ, 'ಒರು ಸರ್ಕಾರ್ ಉತ್ಥೋಧಂ' ಚಿತ್ರದಲ್ಲಿ ನಾಯಕನಾಗಿಯೂ ಪದಾರ್ಪಣೆ ಮಾಡಿದ್ದು ವಿಶೇಷ. ಈ ಸಿನಿಮಾವನ್ನು ಸ್ವತಃ ಸುಬೀಷ್ ಮತ್ತು ಅವರ ಸ್ನೇಹಿತರು ನಿರ್ಮಿಸಿದರು. ಮೇಲ್ನೋಟಕ್ಕೆ ಇದು ಉತ್ತಮ ಚಿತ್ರವೆಂದು ಪರಿಗಣಿಸಲ್ಪಟ್ಟಿದ್ದರೂ, ಚಿತ್ರವು ಆರ್ಥಿಕವಾಗಿ ಯಶಸ್ವಿಯಾಗಲಿಲ್ಲ. ಸದ್ಯ ಇದೇ ನಟನ ಕಣ್ಣೀರಿಗೆ ಕಾರಣವಾಗಿದೆ.  
ಇದೊಂದು ಚಿತ್ರದಿಂದ ಸುಬೀಷ್ ಸುಧಿ ಅವರು ಆರ್ಥಿಕವಾಗಿ ನಷ್ಟಕ್ಕೆ ಸಿಲುಕಿದ್ದಾರೆ. ತನ್ನ ಮನೆ ಹರಾಜಿಗೆ ಬಂದಿದ್ದು, ಯಾವಾಗ ಬೇಕಾದರೂ ಪೊಲೀಸ್​ ನನ್ನನ್ನು ಅರೆಸ್ಟ್​​ ಮಾಡಬಹುದು ಮತ್ತು ಸಾಲ ಕೊಟ್ಟವರು ಫೋನ್​ ಮೇಲೆ ಫೋನ್​ ಮಾಡುತ್ತಿದ್ದಾರೆ ಎಂದು ಸ್ವತಃ ಸುಧಿ ಅವರೇ ಸುದೀರ್ಘ ಫೇಸ್​ಬುಕ್​ ಪೋಸ್ಟ್​ ಮೂಲಕ ಬಹಿರಂಗಪಡಿಸಿದ್ದಾರೆ.  
ಚಿತ್ರಕ್ಕೆ ಹಣ ಕೊಟ್ಟವರು ಈಗ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅದಾಗಲೇ ವಾರಂಟ್ ಜಾರಿಯಾಗಿದೆ ಮತ್ತು ಯಾವುದೇ ಕ್ಷಣದಲ್ಲಿ ಬೇಕಾದರೂ ನಾನು ಜೈಲಿಗೆ ಹೋಗಬಹುದಾದ ಪರಿಸ್ಥಿತಿಯಲ್ಲಿದ್ದೇನೆ. ಕಾನೂನುಬದ್ಧ ಮಾರ್ಗಗಳ ಮೂಲಕ ಹಣ ಸಂಪಾದಿಸಿ, ಸಿನಿಮಾಗಾಗಿ ಮಾಡಿದ ಸಾಲವನ್ನು ತೀರಿಸಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ, ಅದ್ಯಾವುದೂ ವರ್ಕ್​ ಆಗಲಿಲ್ಲ. ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಾಕಿ ಉಳಿದಿರುವ ಹಣ ಕೊಡುವಂತೆ ಸಾಲಗಾರರಿಂದ ಫೋನ್​ ಕಾಲ್​ಗಳು ಬರುತ್ತಲೇ ಇವೆ ಎಂದು ಸುಬೀಷ್ ಅಳಲು ತೋಡಿಕೊಂಡಿದ್ದಾರೆ.
ಈ ಕಷ್ಟದ ಪರಿಸ್ಥಿತಿಯಿಂದ ತೀರ ಮನನೊಂದು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಸಾಯುವ ಮೊದಲು ನನ್ನ ಸ್ನೇಹಿತರಿಗೆ ಸಂದೇಶದ ಮೂಲಕ ಈ ಬಗ್ಗೆ ತಿಳಿಸಿದ್ದೆ. ಅವರು ಪೊಲೀಸರಿಗೆ ಕರೆ ಮಾಡಿ ಸಹಾಯಕ್ಕೆ ಕೋರಿದರು. ಈಗ ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೂ ಭರವಸೆ ಹಾಗೆಯೇ ಉಳಿದಿದೆ ಎಂದು ತಮ್ಮ ನೋವಿನ ನುಡಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).