ಸೈನೈಡ್ ಕೊಲೆ ಕೇಸ್ ಆರೋಪಿ ಜೋಲಿ ಜೋಸೆಫ್
- ತನ್ನ ಕುಟುಂಬದ 6 ಮಂದಿಯನ್ನು ಕೊಲೆಗೈದ ಆರೋಪಿ ಜೋಲಿ
- 'ಅನಾಲಿ' ವೆಬ್ ಸರಣಿ ಪ್ರಸಾರ ರದ್ದು ಮಾಡುವಂತೆ ಕೋರ್ಟ್ಗೆ ಅರ್ಜಿ
- ಆಕೆಯ ಮನವಿ ತಿರಸ್ಕರಿಸಿದ ನ್ಯಾಯಾಲಯ
ಕೇರಳ: ಕೊಡತಾಯಿ ಕೊಲೆ ಪ್ರಕರಣದ ಆರೋಪಿ ಜೋಲಿಯಮ್ಮ ಜೋಸೆಫ್ (ಜೋಲಿ ಜೋಸೆಫ್) ಅಲಿಯಾಸ್ ಜೋಲಿ ಮನವಿಯನ್ನು ಇದೀಗ ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ತನ್ನ ವಿಚಾರಗಳಿಗೆ ಸಂಬಂಧಿಸಿದಂತೆ 'ಅನಾಲಿ' ಟೈಟಲ್ನಲ್ಲಿ ಪ್ರಸಾರ ಮಾಡುತ್ತಿರುವ ಮಲಯಾಳಂ ವೆಬ್ ಸರಣಿ ವಿರುದ್ಧ ಕಿಡಿಕಾರಿದ ಜೋಲಿ, ಈ ಕೂಡಲೇ ಈ ಸಿರೀಸ್ ಪ್ರಸಾರಕ್ಕೆ ತಡೆನೀಡಿ ಎಂದು ಹೈಕೋರ್ಟ್ನಲ್ಲಿ ಮನವಿ ಮಾಡಿದ್ದರು. ಗುರುವಾರ (ಡಿ.18) ಅರ್ಜಿಯನ್ನು ಆಲಿಸಿದ ಕೋರ್ಟ್, ಪ್ರಸಾರಕ್ಕೆ ತಡೆ ನೀಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಆಕೆಯ ಮನವಿಯನ್ನು ತಿರಸ್ಕರಿಸಿದೆ.
ಅಷ್ಟಕ್ಕೂ ಏನಿದು 'ಸೈನೈಡ್' ಪ್ರಕರಣ?
ತನ್ನದೇ ಕುಟುಂಬದ ಆರು ಜನರನ್ನು ಸದ್ದಿಲ್ಲದೇ, ಕಿಂಚಿತ್ತು ಅನುಮಾನ ಮೂಡದಂತೆ ಸೈನೈಡ್ ಅನ್ನು ಊಟದಲ್ಲಿ ಬೆರಸಿ ಕೊಂದ ಆರೋಪದಡಿ ಜೋಲಿ 2019ರಲ್ಲಿ ಬಂಧಿತಳಾದಳು. ಮೊದಲಿಗೆ ಪತಿ ರಾಯ್ ಥಾಮಸ್ನನ್ನು ಕೊಂದ ಕಿರಾತಕಿ, ಮನೆಯ ಆಸ್ತಿಯ ಮೇಲಿನ ಹುಚ್ಚು ವ್ಯಾಮೋಹದಿಂದ ಅತ್ತೆ-ಮಾವ, ಸೋದರ ಸಂಬಂಧಿ ಸೇರಿ 6 ಮಂದಿಯ ಪ್ರಾಣ ಕಸಿದುಕೊಂಡಳು. ಎಲ್ಲರಿಗೂ ಊಟದಲ್ಲಿ ನಿಧಾನವಾಗಿ ಉಸಿರು ನಿಲ್ಲಿಸುವ ಕೆಮಿಕಲ್ ಬಳಸಿಯೇ ಹತ್ಯೆಗೈದಿರುವುದು ಪೋಸ್ಟ್ಮಾರ್ಟ್ಮ್ನಲ್ಲಿ ಬಯಲಾಯಿತು. ಪ್ರಸ್ತುತ, ಈ ಕೇಸ್ನಲ್ಲಿ ಜೈಲುವಾಸ ಅನುಭವಿಸುತ್ತಿರುವ ಜೋಲಿ ಜೋಸೆಫ್, ಪ್ರಕರಣದ ಟ್ರಯಲ್ನಲ್ಲಿದ್ದಾರೆ.
ತಿರಸ್ಕರಿಸುವ ಮುನ್ನ ಕೋರ್ಟ್ ಹೇಳಿದ್ದೇನು?
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಜಿ. ಅರುಣ್, ವೆಬ್ ಸರಣಿಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದರು. ಅವರಿದ್ದ ಪೀಠವು, “ಟೀಸರ್ ಹೊರತುಪಡಿಸಿ ಕಥೆಗೆ ವಿಷಯಕ್ಕೆ ಸ್ವಲ್ಪ ಹೋಲಿಕೆಯಿದೆ ಎಂಬ ನಿರ್ದಿಷ್ಟ ಮಾಹಿತಿ ಎಲ್ಲಿಯೂ ಇಲ್ಲ. ಇಲ್ಲಿಯವರೆಗೆ, ಅದನ್ನು ಪ್ರಸಾರ ಮಾಡಿಲ್ಲ. ಈಗ ಅದಕ್ಕೆ ತಡೆ ನೀಡುವ ಅಗತ್ಯವಿಲ್ಲ. ಕೇವಲ ಊಹಿಸಲಾಗಿದೆ ಮತ್ತು ಊಹೆಗಳಿವೆ ಅಷ್ಟೇ. ಹೀಗೆ, ಇದೇ ವಿಷಯ ಅಂತೇನಿಲ್ಲ. ಸಿನಿಮಾಗಳ ಆಧಾರದ ಮೇಲೆ ಪ್ರಕರಣಗಳನ್ನು ನಿರ್ಧರಿಸಲು ಆಗುವುದಿಲ್ಲ, ಅಲ್ಲವೇ?” ಎಂದು ಹೇಳಿತು,(ಏಜೆನ್ಸೀಸ್).