- 3 ಫ್ಲಾಪ್ ಚಿತ್ರಗಳಿಂದ ಪಾರಾದ ಮಾಲಿವುಡ್ ಹೀರೋ
- ಕಥೆ ಆಯ್ಕೆಯಲ್ಲಿ ನಿಜಕ್ಕೂ 'ಲಕ್ಕಿ ಭಾಸ್ಕರ್' ಈ ದುಲ್ಕರ್
- 3 ತಮಿಳು ಚಿತ್ರದಲ್ಲಿ ಸೋಲು ನೋಡಬೇಕಿದ್ದ ನಟ ಬಚಾವ್
Dulquer Salmaan: ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ 'ಜನನಾಯಗನ್' ಸೆನ್ಸಾರ್ ಮಂಡಳಿಯ ಅಡಚಣೆಯಿಂದ ಮುಂದೂಡಿಕೆಯಾದರೆ, ನಟ ಶಿವಕಾರ್ತಿಕೆಯನ್ ನಟನೆಯ 'ಪರಾಶಕ್ತಿ'ಗೆ ಅದೇ ವರವಾಯಿತು. ತನ್ನೊಂದಿಗೆ ಯಾವ ಸಿನಿಮಾ ಕೂಡ ಪೈಪೋಟಿಗಿಲ್ಲದ ಕಾರಣ, ಉತ್ತಮ ಓಟ, ಗಳಿಕೆ, ವಿಮರ್ಶೆ ಕಾಣಬಹುದು ಎಂದೇ ಚಿತ್ರತಂಡ ನಿರೀಕ್ಷಿಸಿತು. ಆದರೆ, ಈ ಚಿತ್ರ ಸಾಕಷ್ಟು ಟೀಕೆ, ಚರ್ಚೆಗೆ ಗ್ರಾಸವಾಗಿದ್ದೇ ಸದ್ಯ ಫ್ಲಾಪ್ ಹಾದಿ ಹಿಡಿಯುವಂತಾಗಿದೆ.
'ಲಕ್ಕಿ ಭಾಸ್ಕರ್' ಈ ದುಲ್ಕರ್
ಈ ಚಿತ್ರದ ಮೂಲಕ ಸೂಪರ್ಹಿಟ್ ನೋಡಬೇಕೆಂದು ಬಯಸಿದ್ದ ನಿರ್ದೇಶಕಿ ಸುಧಾ ಕೊಂಗರಗೆ ನೆಗೆಟಿವ್ ರಿವ್ಯೂವ್ಗಳು ಕಾಡತೊಡಗಿವೆ. ಚಿತ್ರದಲ್ಲಿನ ಒಂದಷ್ಟು ವ್ಯತ್ಯಾಸದಿಂದಾಗಿ ಕಾಲಿವುಡ್ ಪ್ರೇಕ್ಷಕರು ಸುಧಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಇದರಿಂದ ದುಲ್ಕರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾರಣ, ಈ ಪ್ರಾಜೆಕ್ಟ್ ಮೊದಲು ಸಲ್ಮಾನ್ ಪಾಲಾಗಿತ್ತು. ಆದರೆ, ಅವರಿಂದ ರಿಜೆಕ್ಟ್ ಆದ ಸಿನಿಮಾ ಶಿವಕಾರ್ತಿಕೇಯನ್ ಕೈಸೇರಿತು.
ಆರಂಭದಲ್ಲಿ ಈ ಚಿತ್ರಕ್ಕೆ 'ಪುರನನೂರ್' ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿತ್ತು. ಒಂದಷ್ಟು ಭಿನ್ನಾಭಿಪ್ರಾಯಗಳಿಂದಾಗಿ ತಮಿಳು ನಟ ಸೂರ್ಯ ಚಿತ್ರತಂಡದಿಂದ ಹೊರನಡೆದರು. ಅವರ ಬೆನ್ನಲ್ಲೇ ದುಲ್ಕರ್ ಮತ್ತು ನಜ್ರಿಯಾ ಕೂಡ ಕೈಬಿಟ್ಟರು. ಅದಾದ ಬಳಿಕ ಮುಂದೇನು ಕಥೆ ಎಂದು ಚಿಂತಿಸಿದ ನಿರ್ದೇಶಕಿ, ನಟ ಶಿವಕಾರ್ತಿಕೇಯನ್, ಜಯಂ ರವಿ ಮತ್ತು ಶ್ರೀಲೀಲಾರನ್ನು ಅವರ ಸ್ಥಾನಕ್ಕೆ ಕರೆತಂದು, ಚಿತ್ರವನ್ನು ಪೂರ್ಣಗೊಳಿಸಿದರು.
ಇನ್ನೆರೆಡು ತಮಿಳು ಚಿತ್ರ!
ಪರಾಶಕ್ತಿ ಮಾತ್ರವಲ್ಲ ಇನ್ನೂ ಎರಡು ತಮಿಳು ಫ್ಲಾಪ್ ಚಿತ್ರಗಳಿಂದ ದುಲ್ಕರ್ ಜಾಣತನದಿಂದ ಪಾರಾಗಿದ್ದಾರೆ. ಕಮಲ್ ಹಾಸನ್ ಅಭಿನಯದ ಬಿಗ್ ಬಜೆಟ್ ಚಿತ್ರ 'ಇಂಡಿಯನ್ 2'ನಲ್ಲಿ ದುಲ್ಕರ್ಗೆ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಆಫರ್ ಒಲಿದುಬಂದಿತ್ತು. ಆದರೆ, ಕಾಲಿವುಡ್ ಹಿರಿಯ ನಟನ ಸಿನಿಮಾದಲ್ಲಿ ಅಭಿನಯಿಸುವ ದೊಡ್ಡ ಆಫರ್ ಅನ್ನು ದುಲ್ಕರ್ ರಿಜೆಕ್ಟ್ ಮಾಡಿದರು. ಕಟ್ ಮಾಡಿ ನೋಡಿದರೆ, ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಅನುಭವಿಸಿತು.
ಅದೇ ಕಮಲ್ ಹಾಸನ್, ತ್ರಿಶಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ 'ಥಗ್ಲೈಫ್' ಚಿತ್ರದಲ್ಲಿ ನಟಿಸುವ ಆಫರ್ ದುಲ್ಕರ್ಗೆ ಬಂದಿತ್ತು. ಆದರೆ, ಇಲ್ಲಿಯೂ ಕಥಾಹಂದರದ ಮೇಲೆ ಹೆಚ್ಚು ಗಮನಹರಿಸಿದ 'ಲಕ್ಕಿ ಭಾಸ್ಕರ್' ಈ ಬಿಗ್ ಪ್ರಾಜೆಕ್ಟ್ ಅನ್ನು ತಿರಸ್ಕರಿಸಿದರು. ಅಲ್ಲಿಗೆ ದುಲ್ಕರ್ ಹೊರನಡೆದ ಮೂರು ಬಿಗ್ ಸಿನಿಮಾಗಳು ಹೇಳಿಕೊಳ್ಳುವಂತ ಸದ್ದು ಮಾಡಿಲ್ಲ. ಇದನ್ನು ಗಮನಿಸಿರುವ ಮಾಲಿವುಡ್ ಪ್ರೇಕ್ಷಕರು, ದುಲ್ಕರ್ ಅವರನ್ನು ಅದೃಷ್ಟಶಾಲಿ, ಕಥೆ ಆಯ್ದುಕೊಳ್ಳುವಲ್ಲಿ ಸೂಕ್ಷ್ಮವಾಗಿದ್ದಾರೆ ಎಂದಿದ್ದಾರೆ,(ಏಜೆನ್ಸೀಸ್).