ವೆಂಜರಮೂಡು ಕೊಲೆ ಕೇಸ್ ಆರೋಪಿ
- ಕಳೆದ ವರ್ಷ ಫೆ.24ರಂದು ತನ್ನದೇ ಕುಟುಂಬದವರನ್ನು ಭೀಕರವಾಗಿ ಹತ್ಯೆಗೈದ ಅಫಾನ್
- ಪ್ರಸ್ತುತ, ಕೇರಳದ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರೋಪಿ
- ಈ ಕೇಸ್ ಆಧರಿಸಿ ಚಿತ್ರ ರೂಪಿಸಿರುವ ಮಲಯಾಳಂ ಚಿತ್ರತಂಡ
- ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಆರೋಪಿ ತಂದೆ
ಕೋಝಿಕೋಡ್: ಕಳೆದ ವರ್ಷ ಫೆ.24ರಂದು ತನ್ನದೇ ಕುಟುಂಬದ ನಾಲ್ವರು ಸದಸ್ಯರು ಮತ್ತು ಪ್ರೇಯಸಿ ಸೇರಿ ಒಟ್ಟು ಐವರನ್ನು ಹತ್ಯೆಗೈದ ಆರೋಪಿ ಅಫಾನ್ (Venjaramoodu Case) ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಅಜ್ಜಿ, ತಮ್ಮ, ತಂದೆಯ ಸಹೋದರ ಲತೀಫ್ ಮತ್ತು ಅವರ ಪತ್ನಿ ಶಾಹಿದಾ ಮತ್ತು ಪ್ರೇಯಸಿ ಫರ್ಸಾಳಾನನ್ನು ಸುತ್ತಿಗೆಯಿಂದ ಭೀಕರವಾಗಿ ಕೊಲೆಗೈದ ಅಫಾನ್ ಕೃತ್ಯ ಅಂದು ಇಡೀ ಕೇರಳವನ್ನೇ ಬೆಚ್ಚಿಬೀಳಿಸಿತು. ಈ ಹತ್ಯೆ ಕೇಸ್ನಲ್ಲಿ ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರೋಪಿಯ ಕಥೆಯನ್ನೇ ಇದೀಗ ಚಿತ್ರವಾಗಿ ತರುತ್ತಿರುವುದು ಸದ್ಯ ಕುಟುಂಬಸ್ಥರಿಗೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ.
ವೆಂಜರಮೂಡು ಕೊಲೆ ಕೇಸ್
ವೆಂಜರಮೂಡು ಕೊಲೆ ಕೇಸ್ನ ಆರೋಪಿಯ ತಂದೆ ಅಬ್ದುಲ್ ರಹೀಮ್ ಚಿತ್ರತಂಡದ ವಿರುದ್ಧ ಗರಂ ಆಗಿದ್ದಾರೆ. 'ಕಾಲಂ ಪರಂಗ್ ಕಥಾ' ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವರದಿಗಳ ಪ್ರಕಾರ, ಈ ಹತ್ಯಾಕಾಂಡವನ್ನೇ ಆಧರಿಸಿ ಚಿತ್ರ ರೂಪಿಸಲಾಗಿದೆ. ಹೀಗಾಗಿಯೇ, ಸಿನಿಮಾ ಬಿಡುಗಡೆಯಿಂದ ಪ್ರಕರಣದ ನ್ಯಾಯಯುತ ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಫಾನ್ ತಂದೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ದೊಡ್ಡ ಪರಿಣಾಮ
ಪ್ರಸಾದ್ ನೂರನಾಡು ನಿರ್ದೇಶಿಸಿರುವ ಈ ಚಿತ್ರ ಇದೇ ಫೆಬ್ರವರಿ 6ರಂದು ತೆರೆ ಕಾಣಲು ಸಿದ್ಧವಾಗಿದೆ. ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಈ ಸಮಯದಲ್ಲಿ, ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದರಿಂದ ಮಾಧ್ಯಮ ವಿಚಾರಣೆಗೆ ಕಾರಣವಾಗುತ್ತದೆ ಮತ್ತು ಅದು ವಿಚಾರಣೆಯ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕೋರ್ಟ್ ಏನು ಹೇಳಲಿದೆ? ಚಿತ್ರಕ್ಕೆ ತಡೆ ನೀಡಲಿದ್ಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಏನಿದು ಕೊಲೆ ಪ್ರಕರಣ?
2025ರ ಫೆ.24ರಂದು ತನ್ನದೇ ಕುಟುಂಬದ ಸದಸ್ಯರನ್ನು ಅಮಾನುಷವಾಗಿ ಹಲ್ಲೆಗೈದಿದ್ದಲ್ಲದೇ, ಲತೀಫ್ ಮತ್ತು ಆತನ ಪತ್ನಿಗೆ 18ಕ್ಕೂ ಹೆಚ್ಚು ಬಾರಿ ಸುತ್ತಿಗೆ ಸೇರಿದಂತೆ ಇತರೆ ವಸ್ತುಗಳಿಂದ ಆಫಾನ್ ಭೀಕರವಾಗಿ ಹತ್ಯೆಗೈದ ಘಟನೆ ಕೇರಳದ ತಿರುವನಂತಪುರಂನಲ್ಲಿ ವರದಿಯಾಯಿತು. ಪ್ರಸ್ತುತ, ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಪೊಲೀಸರು, ಆರೋಪಿಯನ್ನು ಕಸ್ಟಡಿಯಲ್ಲಿರಿಸಿದ್ದಾರೆ,(ಏಜೆನ್ಸೀಸ್).