ಆ ಬಟ್ಟೆಯಲ್ಲಿ ಜನರ ಕಣ್ಣುಗಳು ಏನು ಹುಡುಕುತ್ತಿವೆ ಎಂಬುದು ನನಗೆ ಗೊತ್ತಿತ್ತು: ನಟಿ ಐಶ್ವರ್ಯಾ ಲಕ್ಷ್ಮಿ ಬೋಲ್ಡ್ ಸ್ಟೇಟ್ಮೆಂಟ್! Aishwarya Lekshmi
- ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಉಡುಪಿನ ಆಯ್ಕೆ ಬಗ್ಗೆ ಕೇಳಿಬಂದ ಟೀಕೆಗಳಿಗೆ ನಟಿ ಐಶ್ವರ್ಯಾ ಲಕ್ಷ್ಮಿ ನೇರ ಪ್ರತಿಕ್ರಿಯೆ
- ಅಂದು ಧರಿಸಿದ್ದ ಆ ಬಟ್ಟೆಯು ತಮಗೆ ಸರಿಹೋಗುತ್ತಿಲ್ಲ ಎನಿಸಿತ್ತು ಮತ್ತು ಅದೊಂದು ದೊಡ್ಡ ಡ್ರಸ್ಸಿಂಗ್ ಮಿಸ್ಟೇಕ್ ಎಂದು ಒಪ್ಪಿಕೊಂಡ ನಟಿ
- ಫ್ಯಾಷನ್ ಪ್ರಯೋಗ ಮಾಡೋಣ ಎಂದುಕೊಂಡು ಹಠ ಮಾಡಿ ತಾವೇ ಆ ಉಡುಪನ್ನು ಆರಿಸಿಕೊಂಡಿದ್ದಾಗಿ ತಿಳಿಸಿದ ಐಶ್ವರ್ಯಾ ಲಕ್ಷ್ಮಿ
- ಬಟ್ಟೆ ಧರಿಸುವುದರಲ್ಲಿ ಮುಜುಗರವಿರಲಿಲ್ಲ ಆದರೆ ಜನರ ಕಣ್ಣುಗಳು ಏನು ಹುಡುಕುತ್ತಿವೆ ಎಂಬುದು ಸ್ಪಷ್ಟವಾಗಿ ತಿಳಿದಿತ್ತು ಎಂದ ಐಶ್ವರ್ಯಾ
ತಿರುವನಂತಪುರಂ : ಮಲಯಾಳಂ ಚಿತ್ರರಂಗದಲ್ಲಿ ಮಿಂಚಿ, ತಮಿಳು ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲೂ ಬಿಜಿಯಾಗಿರುವ ನಟಿ ಐಶ್ವರ್ಯಾ ಲಕ್ಷ್ಮಿ ( Aishwarya Lekshmi ), ತಮ್ಮ ವೃತ್ತಿಜೀವನ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಜಾಲತಾಣಗಳಿಂದ ಶಾಶ್ವತವಾಗಿ ದೂರ ಉಳಿಯುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದ್ದ ಈ ಟಾಲೆಂಟೆಡ್ ನಟಿ, ಇತ್ತೀಚೆಗೆ ತಮ್ಮ ಬಟ್ಟೆಯ ಆಯ್ಕೆಯ ಬಗ್ಗೆ ಕೇಳಿಬಂದ ಟೀಕೆಗಳಿಗೆ ಸಂದರ್ಶನವೊಂದರಲ್ಲಿ ನೇರವಾಗಿ ಉತ್ತರಿಸಿದ್ದಾರೆ.
ಸಿನಿಮಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಐಶ್ವರ್ಯಾ ಲಕ್ಷ್ಮಿ, ನಿರೂಪಕಿ ರಂಜಿನಿ ಹರಿದಾಸ್ ಅವರೊಂದಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಉದ್ಘಾಟನಾ ಸಮಾರಂಭ ಹಾಗೂ ವಜ್ರಾಭರಣಗಳ ಪ್ರದರ್ಶನದ ವೇಳೆ ಐಶ್ವರ್ಯಾ ಧರಿಸಿದ್ದ ಉಡುಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ನೆಗೆಟಿವ್ ಕಾಮೆಂಟ್‌ಗಳು ಹರಿದಾಡಿದ್ದವು. ಈ ವಿವಾದದ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿರುವ ಐಶ್ವರ್ಯಾ, ಸತ್ಯ ಹೇಳಬೇಕೆಂದರೆ ಇದು ನನಗೆ ದೊಡ್ಡ ವಿಷಯವೇ ಅಲ್ಲ, ಆದರೆ ಅಂದು ನಿಜಕ್ಕೂ ಅಲ್ಲಿ ನಡೆದದ್ದೇನು ಎಂಬುದನ್ನು ಹೇಳುತ್ತೇನೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನಾನು ಧರಿಸುವ ಬಟ್ಟೆಯ ಬಗ್ಗೆ ನಾನು ಯಾರಿಗೂ ಯಾವುದೇ ರೀತಿಯ ಸ್ಪಷ್ಟನೆ ನೀಡಬೇಕಿಲ್ಲ. ಆದರೆ, ಅಂದು ನಡೆದದ್ದು ನಿಜಕ್ಕೂ ಒಂದು ತಮಾಷೆಯ ಸಂಗತಿ ಎನ್ನಬಹುದು. ಆ ದಿನ ನಾನು ಆ ಬಟ್ಟೆಯನ್ನು ಧರಿಸುವಾಗ ನನ್ನ ತಲೆಯಲ್ಲಿ ಏನಿತ್ತು ಎಂದು ಯೋಚಿಸಿದಾಗ ನಾನು ಈಗಲೂ ಆಶ್ಚರ್ಯ ಪಡುತ್ತೇನೆಂದು ನಗಾಡಿದ ಐಶ್ವರ್ಯಾ, ಅಂದು ಟ್ರೋಲ್ ಆಗಿದ್ದು ದುರಾದೃಷ್ಟ ಎಂದರು. ನಾನು ಉದ್ಘಾಟನೆ ಮಾಡಿದ ಆಭರಣದ ಬ್ರ್ಯಾಂಡ್ ಎಲ್ಲಿಯಾದರೂ ಕಣ್ಣಿಗೆ ಬಿದ್ದರೆ ಸಾಕು, ನನ್ನ ಸ್ನೇಹಿತರು ಆ ಫೋಟೋಗಳನ್ನು ನನಗೆ ಕಳುಹಿಸುತ್ತಾರೆ. ನಾನು ಅವರಿಗೆ ಸಾಕು ನಿಲ್ಲಿಸಿ ಎಂದು ಗೋಗರೆಯಬೇಕಾಗುತ್ತದೆ ಎಂದು ತಮಾಷೆಯಾಗಿಯೇ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಅಂದು ನನ್ನ ಕೊಠಡಿಯಲ್ಲಿ ನನ್ನ ಅತ್ಯುತ್ತಮ ಸ್ನೇಹಿತೆ ಮತ್ತು ಮ್ಯಾನೇಜರ್ ಕೂಡ ಇದ್ದರು. ಎಲ್ಲರೂ ನನಗೆ, 'ಐಶ್ವರ್ಯಾ ಬೇಡ, ಬಹುಶಃ ಇದು ವರ್ಕ್ಔಟ್ ಆಗುವುದಿಲ್ಲ ಎಂದು ಆ ಬಟ್ಟೆಯ ಬಗ್ಗೆ ಎಚ್ಚರಿಸಿದ್ದರು. ಅಲ್ಲದೆ, ಅಂದು ನನ್ನ ಕಣ್ಣಮುಂದೆ ಬೇರೆ ಬಟ್ಟೆಗಳೂ ಇದ್ದವು. ಆದರೆ, ನಾನೇ ಹಠ ಮಾಡಿ ಆ ಬಟ್ಟೆಯನ್ನೇ ಆರಿಸಿಕೊಂಡೆ. ಫ್ಯಾಷನ್ ಪ್ರಯೋಗ ಮಾಡೋಣ ಹಾಗೂ ನಿಪ್ಪಲ್ ಕವರ್‌ಗಳ ಟ್ರೆಂಡ್ ಅನ್ನು ಮರುಸೃಷ್ಟಿಸೋಣ ಎಂದು ಬಯಸಿದೆ. ಆದರೆ, ಧರಿಸಿದ ನಂತರ ಆ ಬಟ್ಟೆ ನನಗೆ ಸರಿಹೋಗುತ್ತಿಲ್ಲ ಎನಿಸಿತು. ಅದೊಂದು ಅತಿ ದೊಡ್ಡ ಡ್ರಸ್ಸಿಂಗ್ ಮಿಸ್ಟೇಕ್ ಆಗಿತ್ತು. ಆದರೂ, ಆ ಉಡುಪನ್ನು ಧರಿಸಿದಾಗ ಅದು ನೋಡಲು ಚೆನ್ನಾಗಿತ್ತು. ಅದರೊಂದಿಗೆ ವಜ್ರದ ಆಭರಣಗಳನ್ನು ಧರಿಸಿದಾಗ ನಾನು ತುಂಬಾ ಆಕರ್ಷಕವಾಗಿ ಕಂಡೆ ಎಂದು ಐಶ್ವರ್ಯಾ ಅವರು ವಿವರಿಸಿದ್ದಾರೆ.
ಅಂದು ರಾಮನಾಡ್ ಎಂಬಲ್ಲಿ ಒಂದು ಅಂಗಡಿ ಉದ್ಘಾಟನೆ ಇತ್ತು. ನಂತರ ವಿಮಾನ ಹತ್ತುವ ಹಾದಿಯಲ್ಲಿ ಜ್ಯುವೆಲ್ಲರಿ ಮಾಲೀಕರು ವಜ್ರದ ಪ್ರದರ್ಶನಕ್ಕೂ ಬರುವಂತೆ ವಿನಂತಿಸಿದರು. ಆ ಬ್ರ್ಯಾಂಡ್ ಜತೆಗಿನ ಒಳ್ಳೆಯ ಬಾಂಧವ್ಯದಿಂದಾಗಿ ನಾನು ಒಪ್ಪಿಕೊಂಡೆ. ನನ್ನ ಫ್ಯಾಷನ್ ಪ್ರದರ್ಶಿಸಿ ರೂಢಿಯನ್ನು ಮುರಿಯಬಹುದು ಎಂದುಕೊಂಡಿದ್ದೆ. ಆದರೆ ಅದು ಪ್ಯಾರಿಸ್ ಅಲ್ಲ ಬದಲಿಗೆ ಒಂದು ಸಾಮಾನ್ಯ ವಜ್ರದ ಅಂಗಡಿ ಎಂಬುದನ್ನು ಮತ್ತು ಅಲ್ಲಿ ಸಾಕಷ್ಟು ಕ್ಯಾಮೆರಾಗಳು ಇರುತ್ತವೆ ಎಂಬುದನ್ನು ನಾನು ಮರೆತಿದ್ದೆ ಎಂದಿದ್ದಾರೆ ಐಶ್ವರ್ಯಾ.
ಅಲ್ಲಿ ನನ್ನ ಮುಖದ ಬದಲಿಗೆ ಕೇವಲ ನನ್ನ ದೇಹದ ಭಾಗಗಳ ಮೇಲೆ ಮಾತ್ರ ಕ್ಯಾಮೆರಾಗಳು ಕೇಂದ್ರೀಕೃತವಾಗಿದ್ದನ್ನು ನೋಡಿದಾಗ ನನಗೆ ಅಸಹನೀಯ ಎನಿಸಿತು. ಆ ಮೊಬೈಲ್ ಕ್ಯಾಮೆರಾಗಳ ವರ್ತನೆ 'ನಿಮ್ಮ ಮುಖ ನಮಗೆ ಬೇಕಿಲ್ಲ' ಎನ್ನುವಂತಿತ್ತು. ನನಗೆ ಮುಜುಗರವಾದಾಗ ಸಹಜವಾಗಿಯೇ ಕೈಗಳನ್ನು ಎದೆಗೆ ಅಡ್ಡವಾಗಿಟ್ಟುಕೊಂಡೆ. ಇದನ್ನು ನೋಡಿ ಅನೇಕರು, 'ಓಹ್, ಈಗ ತಾನೇ ಎಚ್ಚರವಾಯಿತು, ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದರು. ಆದರೆ, ಆ ಬಟ್ಟೆಯನ್ನು ಧರಿಸುವುದರಲ್ಲಿ ನನಗೆ ಯಾವುದೇ ಮುಜುಗರವಿರಲಿಲ್ಲ, ಆದರೆ ನಿಮ್ಮ ಕಣ್ಣುಗಳು ಅದರಲ್ಲಿ ಏನು ಹುಡುಕುತ್ತಿವೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿತ್ತು ಎಂದು ನಟಿ ಐಶ್ವರ್ಯಾ ಲಕ್ಷ್ಮಿ ದಿಟ್ಟವಾಗಿ ನುಡಿದಿದ್ದಾರೆ, (ಏಜೆನ್ಸೀಸ್).