- ಭಾರತೀಯ ಸಿನಿಮಾ ರಂಗವನ್ನೇ ಬೆಚ್ಚಿ ಬೀಳಿಸಿದ ಪ್ರಕರಣದ ತೀರ್ಪು ಇತ್ತೀಚೆಗಷ್ಟೇ ಹೊರಬಿತ್ತು
- ಮಲಯಾಳಂ ನಟಿಯನ್ನು ಕಿಡ್ನಾಪ್ ಮಾಡಿ ದೈಹಿಕವಾಗಿ ಕಿರುಕುಳ ನೀಡಿ ಅಟ್ಟಹಾಸ ಮೆರೆದ ಪ್ರಕರಣ
- ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದ ಕೋರ್ಟ್
- ಸೈಬರ್ ದಾಳಿಯಿಂದ ಮನನೊಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ
Actress Attack Case : ಸುಮಾರು 8 ವರ್ಷಗಳ ಹಿಂದೆ ಮಲಯಾಳಂ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಇತ್ತೀಚೆಗಷ್ಟೇ ಹೊರಬಿದ್ದಿತು. ಇದರ ಬೆನ್ನಲ್ಲೇ ಸಂತ್ರಸ್ತ ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಸುದೀರ್ಘವಾಗಿ ಬರೆದುಕೊಂಡಿದ್ದರು. ಇದೀಗ ಸೈಬರ್ ದಾಳಿಯನ್ನು ಎದುರಿಸುತ್ತಿರುವ ನಟಿ ಮತ್ತೊಂದು ಪೋಸ್ಟ್ ಹಂಚಿಕೊಂಡು ತಮ್ಮ ನೋವು ತೋಡಿಕೊಂಡಿದ್ದಾರೆ.
ಲೇಟೆಸ್ಟ್ ಪೋಸ್ಟ್ನಲ್ಲಿ ಏನಿದೆ?
ನಾನು ಒಂದು ತಪ್ಪು ಮಾಡಿದೆ. ಅದೇನೆಂದರೆ, 8 ವರ್ಷಗಳ ಹಿಂದೆ ನನ್ನ ಮೇಲೆ ಹಲ್ಲೆ ನಡೆದಾಗ, ನಾನು ತಕ್ಷಣ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಂಡೆ! ಅದರ ಬದಲು ಆ ದಿನ ನಡೆದದ್ದೆಲ್ಲವೂ ನನ್ನ ಹಣೆಬರಹ ಅಂದುಕೊಂಡು ಯಾರಿಗೂ ಏನೂ ಹೇಳದೆ ಮೌನವಾಗಿರಬೇಕಿತ್ತು. ಇದಾದ ಬಳಿಕ ವಿಡಿಯೋ ಲೀಕ್ ಆದಾಗ, ಮೊದಲೇ ಏಕೆ ಪೊಲೀಸರಿಗೆ ದೂರು ನೀಡಲಿಲ್ಲ ಎಂಬ ಕೆಲವರ ಪ್ರಶ್ನೆಗೆ ಉತ್ತರಿಸಲಾಗದೇ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು ಎಂದು ಭಾವನ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೆ, ನಾನು ಸಂತ್ರಸ್ತೆಯಲ್ಲ, ನಾನೊಬ್ಬ ಸರಳ ಮನುಷ್ಯ, ನನ್ನನ್ನು ಬದುಕಲು ಬಿಡಿ ಎಂದು ಭಾವನಾ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಮೇಲಿನ ಸೈಬರ್ ದಾಳಿಯಿಂದ ಭಾವನಾ ತೀವ್ರ ನೊಂದಿರುವಂತೆ ಕಾಣುತ್ತಿದೆ.
ಈ ಹಿಂದಿನ ಪೋಸ್ಟ್ನಲ್ಲಿ ಏನಿತ್ತು?
8 ವರ್ಷ, 9 ತಿಂಗಳು ಮತ್ತು 23 ದಿನಗಳ ನಂತರ, ಬಹಳ ದೀರ್ಘ ಮತ್ತು ನೋವಿನ ಪ್ರಯಾಣದ ಅಂತ್ಯದಲ್ಲಿ ನಾನು ಕೊನೆಗೂ ಒಂದು ಸಣ್ಣ ಬೆಳಕಿನ ಕಿರಣವನ್ನು ಕಂಡಿದ್ದೇನೆ. ಆರು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಎಂದಿದ್ದಾರೆ. ಮಾತು ಮುಂದುವರಿಸಿದ ಸಂತ್ರಸ್ತ ನಟಿ, ನಾನು ಇಷ್ಟು ದಿನ ಅನುಭವಿಸಿದ ನೋವನ್ನು ಸುಳ್ಳು ಮತ್ತು ಈ ಪ್ರಕರಣ ಒಂದು ಕಟ್ಟುಕಥೆ ಎಂದು ಕರೆದವರಿಗೆ ಈ ಕ್ಷಣ ಅಂದರೆ ಈ ತೀರ್ಪನ್ನು ಸಮರ್ಪಿಸಲಾಗಿದೆ. ಅಂದು ಏನೇನೋ ಮಾತನಾಡಿದವರು ಇಂದು ತೀರ್ಪು ನೋಡಿ ನಿಮ್ಮೊಂದಿಗೆ ಶಾಂತಿಯಿಂದ ಇದ್ದೀರಿ ಎಂದು ನಾನು ಭಾವಿಸುತ್ತೇನೆ. ಎ1 ಆರೋಪಿಯನ್ನು ನನ್ನ ವೈಯಕ್ತಿಕ ಕಾರು ಚಾಲಕನೆಂದು ಇನ್ನೂ ಹೇಳುತ್ತಿದ್ದಾರೆ. ಆದರೆ, ಅದು ಸಂಪೂರ್ಣ ಸುಳ್ಳು. ಆತ ನನ್ನ ಚಾಲಕನಾಗಿರಲಿಲ್ಲ, ನನ್ನ ಉದ್ಯೋಗಿಯೂ ಅಲ್ಲ ಮತ್ತು ನನಗೆ ತಿಳಿದಿರುವ ವ್ಯಕ್ತಿಯೂ ಅಲ್ಲ. ಆತ 2016ರಲ್ಲಿ ನಾನು ಕೆಲಸ ಮಾಡುತ್ತಿದ್ದ ಸಿನಿಮವೊಂದಕ್ಕೆ ಚಾಲಕನಾಗಿ ನಿಯೋಜಿಸಲ್ಪಟ್ಟಿದ್ದ ವ್ಯಕ್ತಿ ಮಾತ್ರ. ವಿಪರ್ಯಾಸವೆಂದರೆ, ಆ ಸಮಯದಲ್ಲಿ ನಾನು ಆತನನ್ನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ಭೇಟಿಯಾಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ತೀರ್ಪು ಅನೇಕ ಜನರಿಗೆ ಅಚ್ಚರಿ ಮೂಡಿಸಬಹುದು ಆದರೆ, ಇದು ನನಗೆ ಅಚ್ಚರಿ ಮೂಡಿಸಲಿಲ್ಲ. 2020ರ ಆರಂಭದಲ್ಲೇ ಏನೋ ಸರಿಯಿಲ್ಲ ಎಂದು ನನಗೆ ಅನಿಸಲು ಪ್ರಾರಂಭಿಸಿತು. ಪ್ರಕರಣವನ್ನು ನಿರ್ವಹಿಸುವ ವಿಧಾನದಲ್ಲಿ, ವಿಶೇಷವಾಗಿ ಒಬ್ಬ ನಿರ್ದಿಷ್ಟ ಆರೋಪಿ ಕಡೆಗೆ ಬಂದಾಗ, ಪ್ರಾಸಿಕ್ಯೂಷನ್ ಸಹ ಬದಲಾವಣೆಗಳನ್ನು ಗಮನಿಸಿತು. ವರ್ಷಗಳಲ್ಲಿ ನಾನು ಹಲವಾರು ಬಾರಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ. ಅಧೀನ ನ್ಯಾಯಾಲಯವನ್ನು ನಾನು ನಂಬುವುದಿಲ್ಲ ಅಂತಾನೂ ಸ್ಪಷ್ಟವಾಗಿ ಹೇಳಿದೆ. ಆದರೆ, ಈ ಪ್ರಕರಣವನ್ನು ಅದೇ ನ್ಯಾಯಾಧೀಶರಿಂದ ದೂರ ಸರಿಸಲು ನಾನು ಮಾಡಿದ ಪ್ರತಿಯೊಂದು ವಿನಂತಿಯನ್ನು ವಜಾಗೊಳಿಸಲಾಯಿತು. ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ನಾನು ನೋವಿನಿಂದ ಕೂಡಿದ ಒಂದು ಅರಿವಿಗೆ ಬಂದಿದ್ದೇನೆ. ಅದೇನೆಂದರೆ, ಈ ದೇಶದ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ ಸಮಾನವಾಗಿ ನಡೆಸಿಕೊಳ್ಳುವುದಿಲ್ಲ. ಪ್ರತಿಯೊಂದು ನ್ಯಾಯಾಲಯವೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ನನಗೆ ತಿಳಿದಿದೆ. ಈ ದೀರ್ಘ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿರುವ ನಟಿ, ನನ್ನ ವಿರುದ್ಧ ನಿಂದನೀಯ ಕಾಮೆಂಟ್‌ಗಳು ಮತ್ತು ನನ್ನ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಲು ನೀವು ಸ್ವತಂತ್ರರು. ಏಕೆಂದರೆ, ಆ ರೀತಿ ಮಾಡಲು ನೀವು ಹಣ ಪಡೆದಿರುತ್ತೀರಿ ಎಂದು ಖಡಕ್ ಮಾತುಗಳನ್ನಾಡಿದ್ದಾರೆ.
ಏನಿದು ಪ್ರಕರಣ?
ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮೆರೆಯುತ್ತಿದ್ದ ಪ್ರಖ್ಯಾತ ನಟಿಯನ್ನು 2017, ಫೆಬ್ರವರಿ 17 ರಂದು ಪಲ್ಸರ್ ಸುನಿ ಮತ್ತು ಆತನ ಗ್ಯಾಂಗ್ ಕಿಡ್ನಾಪ್ ಮಾಡಿ ದೈಹಿಕವಾಗಿ ಕಿರುಕುಳ ( Actress Attack Case ) ನೀಡಿ ಅಟ್ಟಹಾಸ ಮೆರೆದಿತ್ತು. ಬಳಿಕ ಧೈರ್ಯ ಮಾಡಿ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ನಟಿ ಸಾಕಷ್ಟು ಅವಮಾನಗಳನ್ನು ಎದುರಿಸಿ, 8 ವರ್ಷಗಳ ಸುದೀರ್ಘ ಕಾನೂನು ಹೋರಾಟ ಮಾಡಿದರು. ಅಂತಿಮವಾಗಿ ನಟಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಅಂದು ಅಟ್ಟಹಾಸ ಮೆರೆದ ಪಾಪಿಗಳಿಗೆ ಡಿಸೆಂಬರ್ 12 ರಂದು ಶಿಕ್ಷೆ ಪ್ರಕಟಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ, ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ. ಆದರೆ, ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಖುಲಾಸೆಗೊಂಡಿದ್ದು ಅಚ್ಚರಿ ಮೂಡಿಸಿದೆ, (ಏಜೆನ್ಸೀಸ್).