ಬೆಂಗಳೂರು: ಕಿರುತೆರೆಯಲ್ಲಿ ‘ಪಾರು’ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ನಟಿ ಮೋಕ್ಷಿತಾ ಪೈ ‘ಬಿಗ್‌ಬಾಸ್ ಕನ್ನಡ ಸೀಸನ್ -11’ರ ಸ್ಫರ್ಧಿಯಾಗಿದ್ದರು. ಈ ರಿಯಾಲಿಟಿ ಶೋನಲ್ಲಿ ನಾಲ್ಕನೇ ಸ್ಥಾನ ಪಡೆದು, ಸೆಮಿಫೈನಲ್ ಹಂತದವರೆಗೆ ಹೋರಾಡಿದ್ದರು. ಇದೀಗ ಮೋಕ್ಷಿತಾ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಹೆಸರು ‘ಮಿಡಲ್ ಕ್ಲಾಸ್ ರಾಮಾಯಣ’. ಈ ವಿಭಿನ್ನ ಪ್ರೇಮಪುರಾಣಕ್ಕೆ ‘ರೆಬೆಲ್ ಹುಡುಗರು’ ಖ್ಯಾತಿಯ ಧನುಷ್ ವಿ. ಗೌಡ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ವಿನು ಗೌಡ ನಾಯಕನಾಗಿದ್ದು, ಅವರಿಗೆ ಮೋಕ್ಷಿತಾ ಪೈ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗೆ ಕುಂಬಳಕಾಯಿ ಒಡೆದಿದೆ. ಮೋಕ್ಷಿತಾ ಪೈ, ‘ಇದು ನನ್ನ ಮೊದಲ ಸಿನಿಮಾ. ಸೀರಿಯಲ್ ಹಾಗೂ ರಿಯಾಲಿಟಿ ಶೋನೇ ಬೇರೆ. ಆದರೆ, ಒಂದು ಸಿನಿಮಾ ರಿಲೀಸ್ ಆಗುವುದು ಇದೆಯಲ್ಲ ಅದು ಮುಖ್ಯ. ಇದೀಗ ನನ್ನ ಮೊದಲ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿರುವುದು ಮತ್ತಷ್ಟು ಖುಷಿ ನೀಡಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. ನಿರ್ದೇಶಕ ಧನುಷ್ ಗೌಡ, ‘‘ಮಿಡಲ್ ಕ್ಲಾಸ್ ರಾಮಾಯಣ’ ಕನ್ನಡ, ತೆಲುಗಿನಲ್ಲಿ ಮೂಡಿಬರಲಿದೆ. ಕಥೆಯಲ್ಲಿ ರೆಗ್ಯುಲರ್ ಅಂಶಗಳನ್ನು ಬಿಟ್ಟು ಭರಪೂರ ಮನರಂಜನೆಯ ಅಂಶಗಳನ್ನು ಸೇರಿಸಿದ್ದೇವೆ’ ಎಂದರು. ಎಸ್.ನಾರಾಯಣ್, ವೀಣಾ ಸುಂದರ್, ಜಗ್ಗಪ್ಪ. ಬಾಲ ರಾಜವಾಡಿ, ಶೋಭರಾಜ್, ತುಕಾಲಿ ಸಂತೋಷ್, ಹುಲಿ ಕಾರ್ತಿಕ್ ತಾರಾಗಣದಲ್ಲಿದ್ದಾರೆ. ಅಲೆಕ್ಸ್ ಸಂಗೀತ, ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಚಿತ್ರಕ್ಕಿರಲಿದೆ.