ಮುಂಬೈ: ಅದ್ಯಾರು ಇಂಥದ್ದೊಂದು ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ. ಒಟ್ಟಿನಲ್ಲಿ, ಟಾಮ್ ಕ್ರೂಸ್ ಅಭಿನಯದ 'ಮಿಷನ್ ಇಂಪಾಸಿಬಲ್ 7' ಚಿತ್ರದಲ್ಲಿ 'ಬಾಹುಬಲಿ' ಖ್ಯಾತಿಯ ಪ್ರಭಾಸ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಮೊದಲು ಟಾಲಿವುಡ್, ನಂತರ ಬಾಲಿವುಡ್, ಈಗ ಹಾಲಿವುಡ್ ... ತಮ್ಮ ನೆಚ್ಚಿನ ನಟ ಒಂದೊಂದೇ ಚಿತ್ರದ ಮೂಲಕ ಜಗತ್ಪ್ರಸಿದ್ಧರಾದರೆ, ಯಾವ ಅಭಿಮಾನಿಗಳಿಗೆ ತಾನೇ ಖುಷಿಯಾಗುವುದಿಲ್ಲ ಹೇಳಿ? ಪ್ರಭಾಸ್ ಅಭಿಮಾನಿಗಳು ಸಹ ಖುಷಿಯಾಗಿದ್ದರು. ಆದರೆ, ಅವರ ಆಸೆಗೆ 'ಮಿಷನ್ ಇಂಪಾಸಿಬಲ್ 7' ಚಿತ್ರದ ನಿರ್ದೇಶಕ ತಣ್ಣೀರೆರಚಿದ್ದಾರೆ.
ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿಯ ಡಾಕು ರಾಣಿ ದೀಪಿಕಾ?
ಕಳೆದ ಕೆಲವು ದಿನಗಳಿಂದಲೂ 'ಮಿಷನ್ ಇಂಪಾಸಿಬಲ್ 7' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಕೊನೆಗೆ ಕುತೂಹಲದ ತಡೆಯದ ಅಭಿಮಾನಿಯೊಬ್ಬರು, ಸೀದಾ ಚಿತ್ರದ ನಿರ್ದೇಶಕ ಕ್ರಿಸ್ಟೋಫರ್ಗೆ ಮೆಕ್ವೆರಿಗೆ ಸಂದೇಶ ಕಳುಹಿಸಿದ್ದಾರೆ. ಈ ರೀತಿ ಸುದ್ದಿ ಓಡಾಡುತ್ತಿದೆಯಲ್ಲ, ಅದೇನು ನಿಜವಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕ್ರಿಸ್ಟೋಫರ್, 'ಪ್ರಭಾಸ್ ಬಹಳ ಪ್ರತಿಭಾವಂತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಾನ್ಯಾವತ್ತೂ ಅವರನ್ನು ಭೇಟಿ ಸಹ ಆಗಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿರುವ ವಿಷಯವನ್ನು ಪರೋಕ್ಷವಾಗಿ ಅಲ್ಲಗೆಳೆದಿದ್ದಾರೆ.
'ಮಿಷನ್ ಇಂಪಾಸಿಬಲ್ 7' ಚಿತ್ರವು ಸದ್ಯ ಪ್ರೊಡಕ್ಷನ್ ಹಂತದಲ್ಲಿದ್ದು, ಒಂದಿಷ್ಟು ಚಿತ್ರೀಕರಣ ಸಹ ಆಗಿದೆ. 'ಮಿಷನ್ ಇಂಪಾಸಿಬಲ್ - ರೋಗ್ ನೇಷನ್' ಮತ್ತು 'ಮಿಷನ್ ಇಂಪಾಸಿಬಲ್ - ಫಾಲ್ಔಟ್' ಚಿತ್ರಗಳನ್ನು ನಿರ್ದೇಶಿಸದ್ದ ಕ್ರಿಸ್ಟೋಫರ್ ಮೆಕ್ವೆರಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, 2022ರ ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.