ಸಿನಿವಾಣಿ

ಕಾಂತಾರ: ಚಾಪ್ಟರ್ 1​ ಶೂಟಿಂಗ್​ಗೆ ವಿಘ್ನ: ಸಿನಿಮಾ ತಂಡ ತೆರಳುತ್ತಿದ್ದ ಬಸ್ ಪಲ್ಟಿಯಾಗಿ 6 ಮಂದಿಗೆ ಗಾಯ! Kantara Chapter 1

ಉಡುಪಿ: ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದ ನಟ ರಿಷಭ್​ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ: ಚಾಪ್ಟರ್ 1 ( Kantara Chapter 1 ) ಸಿನಿಮಾದ ಚಿತ್ರೀಕರಣಕ್ಕೆ ಇದೀಗ ಅಡ್ಡಿಯೊಂದು ಎದುರಾಗಿದೆ. ಜೂನಿಯರ್​ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್​ ಪಲ್ಟಿಯಾಗಿ 6 ಮಂದಿಗೆ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಉಡುಪಿಯ ಕೊಲ್ಲೂರು ಸಮೀಪದ ಜಡ್ಕಳ್​ ಬಳಿ ನಿನ್ನೆ (ನ.24) ರಾತ್ರಿ ಈ ಘಟನೆ ನಡೆದಿದೆ. ಕಾಂತಾರ: ಚಾಪ್ಟರ್ 1​ ಸಿನಿಮಾದ ಕತೆ ಕರಾವಳಿಯ ದೈವಾರಾಧನೆ ಹಿನ್ನೆಲೆ ಹೊಂದಿದ್ದು, ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ಸಾಕಷ್ಟು ಕಲಾವಿದರು ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ನಿನ್ನೆ ಮುದೂರಿನಲ್ಲಿ ಶೂಟಿಂಗ್​ ಮುಗಿಸಿ ಕೊಲ್ಲೂರಿಗೆ ಹೋಗುವಾಗ ಸುಮಾರು 20 ಜೂನಿಯರ್​ ಕಲಾವಿದರಿದ್ದ ಮಿನಿ ಬಸ್​ ಪಲ್ಟಿಯಾಗಿದೆ. ಇವರಲ್ಲಿ 6 ಮಂದಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತಕ್ಕೆ ಒಳಗಾದವರ ಮಾಹಿತಿ ತಿಳಿದುಬರಬೇಕಿದೆ. ಈ ಅವಘಡದಿಂದ ಚಿತ್ರತಂಡಕ್ಕೆ ಬೇಸರ ಉಂಟಾಗಿದೆ. ಸುಸೂತ್ರವಾಗಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ಇದೀಗ ವಿಘ್ನ ಎದುರಾಗಿದೆ.

ಅಂದಹಾಗೆ ಕಾಂತಾರ: ಚಾಪ್ಟರ್​ 1 ಸಿನಿಮಾಗೆ ವಿಜಯ್​ ಕಿರಗಂದೂರು ಅವರ ಹೊಂಬಾಳೆ ಬ್ಯಾನರ್ಸ್​ ಬಂಡವಾಳ ಹೂಡಿದೆ. ಇತ್ತೀಚೆಗಷ್ಟೇ ಅಂದರೆ ನ.17ರಂದು ರಿಷಬ್ ಶೆಟ್ಟಿ ಅವರು ಸಿನಿಮಾದ ರಿಲೀಸ್​ ಡೇಟ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. 2025ರ ಅಕ್ಟೋಬರ್ 02ರಂದು ದೇಶಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.

2022ರ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಚಿತ್ರಗಳ ಸಾಲಿಗೆ ಸೇರಿದ ಕಾಂತಾರ,​ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು. ‘ಕಾಂತಾರ’ ಚಿತ್ರದ ಪ್ರೀಕ್ವೆಲ್​ ಆಗಿ ‘ಕಾಂತಾರ: ಚಾಪ್ಟರ್​ 1’ ಸಿನಿಮಾ ಮೂಡಿಬರುತ್ತಿದೆ. ಕಾಂತಾರ ಸಿನಿಮಾ ಚಿತ್ರರಂಗಕ್ಕೆ ಹೊಸ ಆಯಾಮ ಮತ್ತು ಪ್ರಶಸ್ತಿಗಳನ್ನು ಹೊತ್ತು ತಂದಿತು. ನಟ ರಿಷಭ್ ಶೆಟ್ಟಿಗೆ, ದೇಶದ ದಿಗ್ಗಜ ನಟರಿಂದ ಪ್ರಶಂಸೆ ವ್ಯಕ್ತವಾಯಿತು. ಅತ್ಯುತ್ತಮ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತು.