ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಮಿಲಿಂದ್ ಮತ್ತು "ಲವ್ ಮಾಕ್ಟೇಲ್' ಖ್ಯಾತಿಯ ರೇಚೆಲ್ ಡೇವಿಡ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ದೀಪಕ್ ಮಧುವನಹಳ್ಳಿ ನಿರ್ದೇಶನದ ಸಿನಿಮಾ "ಅನ್ಲಾಕ್ ರಾಘವ'. ಇತ್ತೀಚೆಗಷ್ಟೆ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದ್ದು, ಫೆ. 7ರಂದು ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದೆ. "ಅನ್ಲಾಕ್ ರಾಘವ'ನ ಬಗ್ಗೆ ನಿರ್ದೇಶಕ ದೀಪಕ್, "ನನ್ನ ಹಿಂದಿನ ಸಿನಿಮಾಗಳನ್ನು ನೋಡಿದ್ದ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಇದೀಗ "ಅನ್ಲಾಕ್ ರಾಘವ' ಚಿತ್ರದ ಫಸ್ಟ್ ಲುಕ್ ನೋಡಿ ನೀನೊಬ್ಬ ಕಮರ್ಷಿಯಲ್ ನಿರ್ದೇಶಕ ಅಂತಿದ್ದಾರೆ. ಇದೊಂದು ಪಕ್ಕಾ ಮನರಂಜನೆಯ ರಸದೌತಣ ನೀಡುವ, ಪ್ರೇಕ್ಷಕರು ನೀಡುವ ದುಡ್ಡಿಗೆ ಮೋಸ ಮಾಡದ ಸಿನಿಮಾ' ಎಂದು ಹೇಳಿಕೊಂಡರು.
ಚಿತ್ರದ ಬಹುತೇಕ ಶೂಟಿಂಗ್ ಚಿತ್ರುದರ್ಗದಲ್ಲಿ ನಡೆದಿದೆ. ನಾಯಕ ಮಿಲಿಂದ್, "ಇತ್ತೀಚೆಗೆ ಚಿತ್ರದ ಟೆಕ್ಸಿಕಲ್ ಶೋ ಆಯೋಜಿಸಿದ್ದೆವು. ಅಲ್ಲಿ ಸಿನಿಮಾ ನೋಡಿದ ಎಲ್ಲರ ಮುಖದಲ್ಲೂ ಭರವಸೆಯು ನಗು ಮೂಡಿತ್ತು. ಆ ನಗು ಪ್ರೇಕ್ಷಕರ ಮುಖದಲ್ಲೂ ಮೂಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಯಕಿ ರೇಚೆಲ್, "ದೀಪಕ್ ಈ ಕಥೆ ಹೇಳಿದಾಗಲೇ ನಟಿಸಲು ನಿರ್ಧರಿಸಿದ್ದೆ. ಅಷ್ಟು ಸುಂದರ ಕಥೆಯಿದೆ. ನಾನಿಲ್ಲಿ ಜಾನಕಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ' ಎಂದರು.
ಮಿಲಿಂದ್, ರೇಚೆಲ್ ಜತೆ ಸಾಧುಕೋಕಿಲ, ಶೋಭರಾಜ್, ಅವಿನಾಶ್, ಭೂಮಿ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. "ರಾಮಾ ರಾಮಾ ರೇ' ನಿರ್ದೇಶಕ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿದೆ.