ಕಾಲಿವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವವರು ಎಂದರೆ ಅದು ನಟಿ ಮತ್ತು 'ಬಿಗ್ ಬಾಸ್' ಖ್ಯಾತಿಯ ಮೀರಾ ಮಿಥುನ್. ಒಂದಿಷ್ಟು ಚಿತ್ರಗಳಲ್ಲಿ ನಟಿಸಿ ಸೋತಿರುವ ಅವರು, ಬರೀ ಮಾತು ಮತ್ತು ಜಗಳಗಳಿಂದಲೇ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.
ಕಳೆದ ತಿಂಗಳಷ್ಟೇ ಮೀರಾ ಒಂದು ಬಾಂಬು ಸಿಡಿಸಿದ್ದರು. ರಜನಿಕಾಂತ್ ಮತ್ತು ವಿಜಯ್ ಇಬ್ಬರೂ ತಮ್ಮ ಮಾನಹಾನಿ ಮಾಡುತ್ತಿದ್ದು, ಅದು ಹೀಗೆಯೇ ಮುಂದುವರೆದರೆ, ತಾನು ಅವರ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ನಂತರ ತ್ರಿಷಾ, ಹೊಟ್ಟೆಕಿಚ್ಚಿನಿಂದ ತಮಗೆ ಸಿಗುತ್ತಿರುವ ಅವಕಾಶಗಳನ್ನು ಕಸಿಯುತ್ತಿದ್ದಾರೆ ಎಂದು ದೂರಿದ್ದರು.
ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಟಾಲಿವುಡ್ನ ಟಾಪ್ ನಟರಾದ ವಿಜಯ್ ಮತ್ತು ಸೂರ್ಯ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ನಿಮ್ಮ ಅಭಿಮಾನಿಗಳಿಗೆ ಹೇಳಿಕೊಟ್ಟಿರುವುದು ಇದೇನಾ ಎಂದು ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಮೀರಾ ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನ ಟಾಪ್ ನಟರ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಹರಿಹಾಯುತ್ತಲೇ ಇದ್ದಾರೆ. ಈ ಪಟ್ಟಿಯಲ್ಲಿ ವಿಜಯ್ ಮತ್ತು ಸೂರ್ಯ ಸಹ ಇದ್ದಾರೆ. ತಮ್ಮ ಮೆಚ್ಚಿನ ನಟರ ವಿರುದ್ಧ ಸತತ ದಾಳಿ ಮಾಡುತ್ತಿರುವ ಮೀರಾಗೆ ಅಭಿಮಾನಿಗಳು ಹಿಗ್ಗಾಮುಗ್ಗಾ ಬಯ್ದಿದ್ದಾರೆ. ಅದೇ ಕಾರಣಕ್ಕೆ ಮೀರಾಗೆ ವಿಜಯ್ ಮತ್ತು ಸೂರ್ಯ ಮೇಲೆ ಇನ್ನಷ್ಟು ಕೋಪ ಹೆಚ್ಚಾಗಿದೆ.
ಈ ಕುರಿತು ಅವರು ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಮೊದಲಿಗೆ ಅಭಿಮಾನಿಗಳಿಗೆ ಝಾಡಿಸಿದ್ದಾರೆ. 'ನೀವು ನನಗೆ ಶಾಪ ಹಾಕುತ್ತಲೇ ಇದ್ದೀರಾ? ಇದೇ ರೀತಿ ಮುಂದುವರೆದರೆ ನಾನು ಸೂರ್ಯನ ಮಡದಿ ಜ್ಯೋತಿಕಾ ಮತ್ತು ವಿಜಯ್ ಹೆಂಡತಿ ಸಂಗೀತಾ ಬಗ್ಗೆಯೂ ಇದೇ ತರಹ ಪದಗಳನ್ನು ಉಪಯೋಗಿಸುತ್ತೇನೆ' ಎಂದು ಅವರು ಧಮ್ಕಿ ಹಾಕಿದ್ದಾರೆ.
ಇನ್ನು ಸ್ಟಾರ್ ನಟರುಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 'ವಿಜಯ್ ಮತ್ತು ಸೂರ್ಯ ಅವರ ಅಭಿಮಾನಿಗಳಿಗೆ ನಿಜಕ್ಕೂ ನಾಜಿಕೆ ಇಲ್ಲ. ನೀವು ನಿಮ್ಮ ಅಭಿಮಾನಿಗಳಿಗೆ ಹೇಳಿಕೊಟ್ಟಿರುವುದು ಇದನ್ನೇ ಏನು? ನೀವು ಸ್ಟಾರ್ಗಳು. ನಿಮ್ಮ ಲೆವೆಲ್ ಹೇಗಿರಬೇಕು. ಆದರೆ, ಅಭಿಮಾನಿಗಳನ್ನು ಬಿಟ್ಟು ಹೆಂಗಸರನ್ನು ಹೆದರಿಸುತ್ತೀರಿ. ನಾಳೆಯಿಂದ ಗಂಡಸರು ಎಂದು ಕರೆದುಕೊಳ್ಳಬೇಡಿ. ಸೀರೆ, ಬಳೆ ಕಳಿಸಿಕೊಡುತ್ತೀನಿ, ಹಾಕಿಕೊಳ್ಳಿ' ಎಂದು ಸೂರ್ಯ ಮತ್ತು ವಿಜಯ್ಗೆ ಹೇಳಿದ್ದಾರೆ.