ಸಿನಿವಾಣಿ

ಇವರೆಲ್ಲಾ ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ? ಮೀರಾ ಮಿಥುನ್​ ಪ್ರಶ್ನೆ

ಕಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವವರು ಎಂದರೆ ಅದು ಮೀರಾ ಮಿಥುನ್​. 'ಬಿಗ್​ ಬಾಸ್​'ನ ಮೂರನೆಯ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದ ಈಕೆ, ಈ ಹಿಂದೆ ಕಮಲ್​ ಹಾಸನ್​, ತ್ರಿಷಾ ಮುಂತಾದವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈಗ ಅದೇ ಮೀರಾ, ಸೀದಾ ರಜನಿಕಾಂತ್​ ಮತ್ತು ವಿಜಯ್​ ವಿರುದ್ಧ ಲೀಗಲ್​ ಆಕ್ಷನ್​ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, ರಜನಿಕಾಂತ್​ ಮತ್ತು ವಿಜಯ್​ ತಮ್ಮ ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸುತ್ತಿದ್ದು, ಅವರ ವಿರುದ್ಧ ನ್ಯಾಯಯುತವಾದ ಹೋರಾಟ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ತಮಿಳು ನಾಡು ನನ್ನನ್ನು ಬಾಯ್ಕಾಟ್​ ಮಾಡಿತು. ಹಾಗಂತ ನನಗೆ ಬೇಸರವಿಲ್ಲ. ಏಕೆಂದರೆ, ನಾನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಮಾಡಲ್​ ಆಗಿದ್ದೇನೆ. ಕಾಲಿವುಡ್​ನ ವಿರುದ್ಧ ತಿರುಗಿ ಬಿದ್ದಿತು. ಅದೇ ಕಾರಣಕ್ಕೆ ನಾನು ಬಾಲಿವುಡ್​ ಮತ್ತು ಹಾಲಿವುಡ್​ನಲ್ಲಿ ಮಿಂಚುತ್ತಿದ್ದೇನೆ. ಇವರೆಲ್ಲಾ ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನನ್ನು ಹರಾಸ್​ ಮಾಡುವುದು, ನನ್ನ ಬಗ್ಗೆ ಮಾತಾಡುವುದು ಇಷ್ಟೇನಾ ಇವರಿಗೆ ಗೊತ್ತಿರುವುದು' ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇನ್ನು ಜಾತಿ, ಧರ್ಮದ ವಿಷಯಗಳನ್ನೆಲ್ಲಾ ಎಳೆದು ತಂದಿರುವ ಮೀರಾ, 'ತಮಿಳುನಾಡು ತಮಿಳರಿಗೆ, ಹಿಂದುಗಳಿಗೆ ಸೇರಿದ್ದು. ಆದರೆ, ಇಂದು ಮಲಯಾಳಿಗಳು, ಬೇರೆ ಧರ್ಮದವರು ಬಂದು ಇಲ್ಲಿ ಆಳುತ್ತಿದ್ದಾರೆ. ಒಬ್ಬ ತಮಿಳು ಹೆಣ್ಣಿಗೆ ಅವಮಾನ ಮಾಡುತ್ತಿದ್ದಾರೆ. ರಜನಿಕಾಂತ್​ ಮತ್ತು ವಿಜಯ್​ ಇಬ್ಬರೂ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ, ನಾನು ಅವರ ವಿರುದ್ಧ ಲೀಗಲ್​ ಆಕ್ಷನ್​ ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

ಮೀರಾ ಮಾಡಿರುವ ಇಷ್ಟೆಲ್ಲಾ ಆರೋಪಗಳಿಗೆ, ಕಾಲಿವುಡ್​ ಜನ ಏನಂತ ಉತ್ತರಿಸುತ್ತಾರೋ ಗೊತ್ತಿಲ್ಲ.