ಈ ಮೀರಾ ಮಿಥುನ್ ಎಂಬ ಕಾಲಿವುಡ್ ನಟಿ ಇಷ್ಟೆಲ್ಲಾ ಪ್ರಚಾರಕ್ಕಾಗಿ ಮಾಡುತ್ತಿದ್ದಾರೋ ಅಥವಾ ಹತಾಶೆಯಿಂದ ಮಾಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರತಿ ದಿನ ಕಾಲಿವುಡ್ನ ಜನಪ್ರಿಯ ಸ್ಟಾರ್ಗಳ ಕಾಲೆಳೆಯುವುದನ್ನು ಮಾತ್ರ ರೂಢಿ ಮಾಡಿಕೊಂಡಿದ್ದಾರೆ.
ಈಗಾಗಲೇ ಅವರು ಕೆಲವು ದಿನಗಳಿಂದ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಸೂರ್ಯ, ತ್ರಿಷಾ, ಜ್ಯೋತಿಕಾ ಸೇರಿದಂತೆ ಹಲವರ ಕಾಲೆಳೆದಿದ್ದಾರೆ. ಅವರಿಗೆ, ಅವರ ಅಭಿಮಾನಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಆದರೆ, ಅವರ ವಿರುದ್ಧ ಯಾವೊಬ್ಬ ಸ್ಟಾರ್ ನಟ ಅಥವಾ ನಟಿ ಸಹ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಆಮೀರ್, ರಾಣಾ, ರಾಕುಲ್ಗೆ ರಿಯಾ ಫೋನ್ ಮಾಡಿದ್ದೇಕೆ?
ಇದನ್ನು ನೋಡಿ ಸಿಟ್ಟಾಗಿರುವ ಹಿರಿಯ ನಿರ್ದೇಶಕ ಭಾರತೀರಾಜ ಅವರು, ಮೀರಾ ಹೇಳಿಕೆಗಳನ್ನು ಖಂಡಿಸಿದ್ದರು. ಜನಪ್ರಿಯತೆಗಾಗಿ ನಟ-ನಟಿಯರ ಕಾಲೆಳೆಯುವುದು ತಪ್ಪು ಎಂದಿದ್ದರು. ಕಷ್ಟಪಟ್ಟು ಕೆಲಸ ಮಾಡಿ, ಜನಪ್ರಿಯಳಾಗು ಎಂದು ಹಿತವಚನ ನೀಡಿದ್ದರು.
ಅದಾಗಿ ಎರಡೇ ದಿನಕ್ಕೆ ಮೀರಾ ಮತ್ತೆ ತಮ್ಮ ಹಳೆಯ ಕೆಲಸವನ್ನು ಶುರು ಹಚ್ಚಿಕೊಂಡಿದ್ದಾರೆ. ಈ ಬಾರಿ ವಿಜಯ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ವಿಷಯವೇನೆಂದರೆ, ಇದೀಗ ಎಲ್ಲಾ ಕಡೆ ಗ್ರೀನ್ ಇಂಡಿಯಾ ಚಾಲೆಂಜ್ ನಡೆಯುತ್ತಿದೆಯಲ್ಲಾ? ಅದರ ಅಂಗವಾಗಿ ತೆಲುಗು ನಟ ಮಹೇಶ್ ಬಾಬು ಅವರು ವಿಜಯ್ಗೆ ಗಿಡ ನೆಡುವ ಚಾಲೆಂಜ್ ಹಾಕಿದ್ದರು.
ಅದರಂತೆ ವಿಜಯ್, ತಮ್ಮ ಮನೆಯ ಹಿತ್ತಲಲ್ಲಿ ಒಂದು ಗಿಡ ನೆಟ್ಟಿದ್ದಾರೆ. ಅಷ್ಟೇ ಅಲ್ಲ, ಅದರ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳಿಗೆ ಖುಷಿಯಾಗಿರಬಹುದು, ಮೀರಾಗೆ ಅಲ್ಲ. ತಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಹಾಕುರುವ ಆಕೆ, 'ಮನೆಯಲ್ಲಿ ಒಂದು ಗಿಡ ನೆಟ್ಟುಬಿಟ್ರೆ ಸಾಮಾಜಿಕ ಕಳಕಳಿ ಆಗುವುದಿಲ್ಲ. ಗಿಡಗಳನ್ನು ಎಲ್ಲಿ ಮತ್ತು ಹೇಗೆ ನೆಡಬೇಕು ಎಂಬುದನ್ನು ಹಿರಿಯ ನಟ ವಿವೇಕ್ ಅವರನ್ನು ನೋಡಿ ಕಲಿತಿಕೋ' ಎಂದು ಸಲಹೆ ನೀಡಿದ್ದಾರೆ.
ವಿವೇಕ್ ಅವರು, 'ಗ್ರೀನ್ ಕಲಾಮ್' ಎಂಬ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು, ತಮಿಳುನಾಡಿನಾದ್ಯಂತ 10 ಲಕ್ಷ ಸಸಿಗಳನ್ನು ನೆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರನ್ನು ಹೋಲಿಸಿ ಮೀರಾ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.