ಬೆಂಗಳೂರು: ಹಿಂದಿ ಚಿತ್ರರಂಗದಲ್ಲಿ ಬೆಂಗಳೂರು ಮೂಲದ ನಟಿಯರು ಈಗಾಗಲೇ ಕಮಾಲ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಕೃತಿ ಕರಬಂಧ ಸೇರಿ ಹಲವು ನಟಿಯರು ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ. ಇದೀಗ ಮತ್ತೊಬ್ಬ ಬೆಂಗಳೂರು ಹುಡುಗಿ ಹಿಂದಿಯ ಬಹು ನಿರೀಕ್ಷಿತ ಚಿತ್ರದಲ್ಲಿ ಅವಕಾಶ ಪಡೆದು, ಎಲ್ಲರ ಹುಬ್ಬೇರಿಸಿದ್ದಾರೆ. ಹೌದು, ಅವರೇ ಮೇಧಾ ರಾಣಾ. ಮೂಲತಃ ಗುರುಗ್ರಾಮದವರಾದ ಮೇಧಾ ವ್ಯಾಸಂಗ ಹಾಗೂ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದ ಅವರು ಬಳಿಕ ಮಾಡೆಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಪ್ರಸಾದ್ ಬಿದ್ದಪ ಗರಡಿಯಲ್ಲಿ ಮಾಡೆಲಿಂಗ್ ಮಾಡಿ, ಬಳಿಕ ಸಿನಿಮಾ ಕನಸು ಹೊತ್ತು ಮುಂಬೈಗೆ ಹಾರಿದರು. ಹಿಂದಿಯ ‘ಲಂಡನ್ ಫೈಲ್ಸ್’, ‘ಇಷ್ಕ್ ಇನ್ ದ ಏರ್’ ವೆಬ್ ಸರಣಿ ಹಾಗೂ ‘ಫ್ರೈಡೇ ನೈಟ್‌ಪ್ಲ್ಯಾನ್’ ಚಿತ್ರಗಳಲ್ಲಿ ನಟಿಸಿದರು. ಇದೀಗ 26 ವರ್ಷದ ಮೇಧಾ ಬಾಲಿವುಡ್ ಬಹುನಿರೀಕ್ಷಿತ ‘ಬಾರ್ಡರ್-2’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ನಟ ವರುಣ್ ಧವನ್‌ಗೆ ಜೋಡಿಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. 1997ರಲ್ಲಿ ತೆರೆಕಂಡಿದ್ದ ‘ಬಾರ್ಡರ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ಅನುರಾಗ್ ಸಿಂಗ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸನ್ನಿ ಡಿಯೋಲ್, ವರುಣ್ ಧವನ್ ಮುಖ್ಯಭೂಮಿಕೆಯಲ್ಲಿದ್ದು, ಇದೀಗ ಮೇಧಾ ರಾಣಾ ಹೊಸ ಸೇರ್ಪಡೆಯಾಗಿದ್ದಾರೆ. 2026ರ ಜ. 23ರಂದು ‘ಬಾರ್ಡರ್-2’ ತೆರೆಗೆ ಬರಲಿದೆ. -ಏಜೆನ್ಸೀಸ್