ಸಿನಿವಾಣಿ

mathonda heluve film review: ಮಯೂರ ಪ್ರೀತಿಯಲ್ಲಿ ಖುಷಿಯ ಗಾನ

ಚಿತ್ರ: ಮಾತೊಂದ ಹೇಳುವೆ

ನಿರ್ದೇಶನ: ಮಯೂರ್ ಕಡಿ

ತಾರಾಗಣ: ಮಯೂರ್ ಕಡಿ, ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ.ಸತೀಶ್ಚಂದ್ರ, ಚೇತನ್ ಮರಂಬೀಡ್, ಪ್ರತೀಕ್ ರಡ್ಡೇರ್

ಶಿವ ಸ್ಥಾವರಮಠ

ಮೊದಲ ಪ್ರೀತಿಯು ಮಧುರವಾದ ಭಾವನೆ ಹಾಗೂ ಹಿತವಾದ ಅನುಭವವನ್ನು ನೀಡುತ್ತದೆ. ಅದನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಅಕಸ್ಮಾತ್, ಆ ಪ್ರೀತಿ ಕೈ ತಪ್ಪಿದರೆ ಜೀವನ ಪರ್ಯಂತ ಪ್ರೇಮಿಗಳು ಅದನ್ನು ನೆನಪಿಸಿಕೊಳ್ಳುತ್ತಾರೆ ಎಂಬುದನ್ನು ನಿರೂಪಿಸುವ ಕಥೆಯೇ ‘ಮಾತೊಂದ ಹೇಳುವೆ’.

ಆತ ಹುಬ್ಬಳ್ಳಿ-ಧಾರವಾಡದ ಹುಡುಗ ಮಯೂರ್. ಆರ್‌ಜೆ ಆಗಿ ಕೆಲಸ ಮಾಡುವಾತ ‘ಪ್ಯಾಚ್-ಅಪ್ ವಿಥ್ ಮಯೂರ್’ ಶೋ ಮೂಲಕ ನೊಂದ ಮನಸುಗಳನ್ನು ಕೂಡಿಸುವ ಕೆಲಸ ಮಾಡುತ್ತಿರುತ್ತಾನೆ. ಎಲ್ಲರ ಮನಸುಗಳನ್ನು ಕೂಡಿಸುವ ಈತ ಮಾತ್ರ ಸಿಂಗಲ್. ಮನೆಯವರು, ಸ್ನೇಹಿತರು ಹಾಗೂ ಆಪ್ತರು ಎಲ್ಲರೂ ಕೇಳುವ ಪ್ರಶ್ನೆ ನಿನ್ನ ಹುಡುಗಿ ಯಾರು? ಅಂತಾ.. ಇಂತಹ ಸಮಯದಲ್ಲಿ ಈತನಿಗೆ ಎದುರಾಗುವವಳೇ ಮೈಸೂರು ಹುಡುಗಿ ಖುಷಿ (ಅಪೂರ್ವ). ನೋಡಿದ ಕೂಡಲೇ ಪ್ರೀತಿ ಚಿಗುರೊಡೆದು, ಇವಳೊಂದಿಗೇ ಬದುಕಬೇಕು ಎಂದು ತೀರ್ಮಾನಕ್ಕೆ ಬರುತ್ತಾನೆ. ಅಂತೆಯೇ, ಖುಷಿಯ ಪರಿಚಯ, ಸ್ನೇಹ, ಒಡನಾಟ ಕೊನೆಗೆ ಪ್ರೀತಿಗೆ ತಿರುಗುವ ಮುನ್ನವೇ ಒಂದು ಘಟನೆ ನಡೆಯುತ್ತದೆ. ಆ ಘಟನೆ ಏನು? ಹುಬ್ಬಳ್ಳಿ ಹುಡುಗ- ಮೈಸೂರು ಹುಡುಗಿಯ ಕಥೆ ಏನು? ಎಂದು ತಿಳಿಯಬೇಕಾದರೆ ನೀವು ‘ಮಾತೊಂದ ಹೇಳುವೆ’ ಸಿನಿಮಾ ನೋಡಬೇಕು.

ಮಯೂರ್ ಕಡಿ ಈ ಚಿತ್ರದ ಮೂಲಕ ನಟನೆ ಹಾಗೂ ನಿರ್ದೇಶನದ ಸಾಹಸ ಮಾಡಿದ್ದಾರೆ. ಎರಡನ್ನೂ ಸಮನಾಗಿ ಸರಿದೂಗಿಸಿದ್ದಾರೆ. ಒಂದು ಸುಂದರ ಪ್ರೇಮಕಥೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಮುದ ನೀಡುವ ದೃಶ್ಯಗಳು ಹಾಗೂ ಆಪ್ತವಾದ ಜವಾರಿ ಸಂಭಾಷಣೆ ಮೂಲಕ ಸಿನಿಮಾ ನೋಡಿಸಿಕೊಳ್ಳುತ್ತದೆ. ಅವಧಿಯನ್ನು ಇನ್ನು ಸ್ವಲ್ಪ ತಗ್ಗಿಸುವ ಅವಕಾಶವಿತ್ತು. ಮೊದಲರ್ಧ ನಾಯಕ-ನಾಯಕಿಯ ಬದುಕಿನ ಪರಿಚಯ, ಇಬ್ಬರ ಸ್ನೇಹ ತೋರಿಸಲಾಗಿದ್ದು, ದ್ವಿತೀಯಾರ್ಧದಲ್ಲಿ ಕಥೆ ಟ್ವಿಸ್ಟ್ ಪಡೆದುಕೊಳ್ಳುತ್ತದೆ. ಮಯೂರ್ ನಟನೆಯಲ್ಲಿ ಗಮನಸೆಳೆಯುತ್ತಾರೆ. ಎಮೋಷನ್‌ಗಳನ್ನು ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಅಪೂರ್ವ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಗಿರೀಶ್ ಶಿವಣ್ಣ, ಚೇತನ್ ಪಾತ್ರಗಳು ಕಥೆಗೆ ಪೂರಕವಾಗಿವೆ. ಪಾರ್ವತೇಶ್ ಕ್ಯಾಮರಾ ಹುಬ್ಬಳ್ಳಿ-ಧಾರವಾಡ ಪರಿಸರವನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಉಲ್ಲಾಸ್ ಕುಲಕರ್ಣಿ ಸಂಗೀತದಲ್ಲಿ ಮೂಡಿಬಂದಿರುವ ಉತ್ತರ ಕರ್ನಾಟಕ ಪರಿಚಯಿಸುವ ಗೀತೆ ಹಾಗೂ ‘ಸಿಂಗಲ್’ ಆ್ಯಂಥಮ್ ಇಷ್ಟವಾಗುತ್ತವೆ.