ಸದ್ಯ, ಎಲ್ಲಾ ಭಾಷೆಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಹವಾ ಎಂದರೆ ತಪ್ಪಾಗುವುದಿಲ್ಲ. ಅದರಲ್ಲಿಯೂ, ಅತೀ ಹೆಚ್ಚು ಪ್ಯಾನ್ ಇಂಡಿಯಾ ಸ್ಟಾರ್ಗಳು ಟಾಲಿವುಡ್ನಲ್ಲಿದ್ದಾರೆ. ಇನ್ನು, ಇದೀಗ ಟಾಲಿವುಡ್ನಲ್ಲಿ ಮತ್ತೊಂದು ಹೀರೋ ಪ್ಯಾನ್ ಇಂಡಿಯನ್ ಸ್ಟಾರ್ ಆಗಲಿದ್ದಾರೆ. ಹೌದು, ತೆಲುಗಿನ ಮಾಸ್ ಮಹಾರಾಜ ನಟ ರವಿತೇಜ ಅವರು 'ಟೈಗರ್ ನಾಗೇಶ್ವರ್ ರಾವ್' ಎಂಬ ಹೊಸ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ರೆಡಿಯಾಗಿದ್ದಾರೆ. ನಿರ್ದೇಶಕ ವಂಶಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ನಡಿ ಅಭಿಷೇಕ್ ಅಗರ್ವಾಲ್ ಅವರು ನಿರ್ಮಾಣ ಮಾಡಲಿದ್ದಾರೆ. ಅಂದಹಾಗೆ, 'ಟೈಗರ್ ನಾಗೇಶ್ವರ್ ರಾವ್ ಸಿನಿಮಾದ' ಮುಹೂರ್ತ ಯುಗಾದಿ ಹಬ್ಬದಂದು ಅದ್ಧೂರಿಯಾಗಿ ನಡೆಯಲಿದೆ. ಹಬ್ಬದಂದು ಮಧ್ಯಾಹ್ನ 12.06 ನಿಮಿಷಕ್ಕೆ ಸಿನಿಮಾದ ಪ್ರೀ-ಲುಕ್ ಕೂಡಾ ರಿಲೀಸ್ ಆಗಲಿದ್ದು, ಈ ಸಿನಿಮಾ ರವಿತೇಜ ಅವರ ಸಿನಿಕರಿಯರ್ ನಲ್ಲೇ ಅತೀ ಹೆಚ್ಚು ಬಿಗ್ ಬಜೆಟ್ ಸಿನಿಮಾವಾಗಿರಲಿದೆ ಎಂಬ ಮಾಹಿತಿ ಇದೆ.
ಇನ್ನು, 'ಟೈಗರ್ ನಾಗೇಶ್ವರ್ ರಾವ್' ಸಿನಿಮಾ 1970 ರಲ್ಲಿ ಆಂಧ್ರದ ಸ್ಟುವರ್ಟ್‌ಪುರಂ ಎಂಬಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನನ್ನು ಆಧರಿಸಿದ ಕಥೆಯಾಗಿದೆ. ಈ ಚಿತ್ರಕ್ಕಾಗಿ ಮಾಸ್ ಮಹಾರಾಜ ತಮ್ಮ ಮಾಸ್ ಲುಕ್ ಅನ್ನು ಚುರು ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಜತೆಗೆ, ನಟನಿಗೆ ಬಾಲಿವುಡ್ ಬ್ಯೂಟಿ ನಟಿ ಕೃತಿ ಸನೊನ್ ಸಹೋದರಿ ನಟಿ ನೂಪೂರ್ ಸನೊನ್ ಅವರು ಜೋಡಿಯಾಗಿಲಿದ್ದಾರೆ. 'ಟೈಗರ್ ನಾಗೇಶ್ವರ್ ರಾವ್' ಸಿನಿಮಾ ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈಗಾಗಲೇ, ಚಿತ್ರದ ಒಂದು ಪೋಸ್ಟರ್ ರಿಲೀಸ್ ಆಗಿದ್ದು, ಮಾಸ್ ಮಹಾರಾಜನ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿದೆ.