ಮದುವೆ ಯಾವಾಗ?- ಇಂಥದ್ದೊಂದು ಪ್ರಶ್ನೆ ಕೇಳಿಕೇಳಿ ತಾಪ್ಸಿ ಪನ್ನು ಸುಸ್ತಾಗಿ ಹೋಗಿದ್ದಾರೆ. ಯಾರು ನೋಡಿದರೂ, ಮದುವೆ ಬಗ್ಗೆ ಪ್ರಶ್ನಿಸುವುದನ್ನು ಕೇಳಿ ಸಿಟ್ಟಾಗಿರುವ ಅವರು, ಸದ್ಯಕ್ಕೆ ತಾನು ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬಾಲಿವುಡ್ನಲ್ಲಿ ಹಲವರು ಮದುವೆಯಾಗುತ್ತಿದ್ದಾರೆ ಎಂದರೆ ನಾನು ಸಹ ಆಗಬೇಕು ಅಂತೇನಿಲ್ಲ. ನನಗಂತೂ ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲ. ಕೈತುಂಬ ಸಿನಿಮಾಗಳಿವೆ. ಅದನ್ನು ಮುಗಿಸಿ ಆ ನಂತರ ಯೋಚಿಸುತ್ತಾರೆ. ನನಗೆ ತುರ್ತಾಗಿ ಮದುವೆಯಾಗುವ ಆಸೆ ಏನಿಲ್ಲ. ಏಕೆಂದರೆ, ಮದುವೆಯಾದ ನಂತರ ಏನೋ ಬದಲಾಗಿ ಬಿಡುತ್ತದೆ ಎಂಬ ನಂಬಿಕೆ ನನಗಿಲ್ಲ. ಎಲ್ಲವೂ ಅದೇ ರೀತಿ ಮುಂದುವರಿಯುತ್ತದೆ. ಹಾಗಾಗಿ, ಸದ್ಯ ಮದುವೆಯಾಗುವ ಯೋಚನೆ ಖಂಡಿತ ಇಲ್ಲ. ಸಮಯ ಸಿಕ್ಕಾಗ ನೋಡೋಣ’ ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸ್ವಲ್ಪ ಶಾಂತಿಯುತವಾಗಿರಬಹುದು ಎಂದಿರುವ ತಾಪ್ಸಿ, ‘ಲಾಕ್ಡೌನ್ನಿಂದಾಗಿ ಕಳೆದ ಎರಡು ವರ್ಷ ಸಾಕಷ್ಟು ಗಡಿಬಿಡಿ ಇತ್ತು. ಹಲವು ಚಿತ್ರಗಳ ಶೂಟಿಂಗ್ನಲ್ಲಿ ಭಾಗವಹಿಸಿದ್ದ ನಾನು, ಕುಟುಂಬದವರ ಜತೆಗೆ ಸರಿಯಾಗಿ ಸಮಯ ಕಳೆಯುವುದಕ್ಕೂ ಸಾಧ್ಯವಾಗಲಿಲ್ಲ. ಇದರಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಈ ವರ್ಷವಾದರೂ ಯಾವುದೇ ಲಾಕ್ಡೌನ್ ಇಲ್ಲದೆ, ಎಲ್ಲವೂ ಶಾಂತಿಯುತವಾಗಿ ಇರಲಿದೆ ಎಂಬ ಆಶಯ ನನ್ನದು’ ಎನ್ನುತ್ತಾರೆ ತಾಪ್ಸಿ.