ಸಿನಿವಾಣಿ

ಡಿಸೆಂಬರ್​​ನಲ್ಲಿ ಮದುವೆ; ಯಾವುದು ನಿಜ, ಯಾವುದು ಸುಳ್ಳು?

rashmirhebbur

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್, ಡಿಸೆಂಬರ್​ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಅದು ನಿಜವಾಗುತ್ತದೋ, ಇಲ್ಲವೋ ಗೊತ್ತಿಲ್ಲ. ಈ ಮಧ್ಯೆ, ರಣಬೀರ್ ಕಪೂರ್ ಮತ್ತು ಆಲಿಯಾ ಅಲ್ಲದೆ, ವಿಕ್ಕಿ ಕೌಶಾಲ್ ಮತ್ತು ಕತ್ರೀನಾ ಕೈಫ್ ಸಹ ಅದೇ ತಿಂಗಳಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ.

ಎರಡು ದಿನಗಳಿಂದ ಬಾಲಿವುಡ್​ನಲ್ಲಿ ಈ ಎರಡು ಜೋಡಿಗಳ ಮದುವೆಯದ್ದೇ ದೊಡ್ಡ ಸುದ್ದಿಯಾಗಿಬಿಟ್ಟಿದೆ. ಮೂಲಗಳ ಪ್ರಕಾರ, ಎರಡೂ ಮದುವೆಗಳು ರಾಜಸ್ಥಾನದಲ್ಲಿ ನಡೆಯಲಿವೆ. ಈ ಪೈಕಿ ಕತ್ರೀನಾ ಮದುವೆ ಸವಾಯಿ ಮಾಧೋಪುರದ ಬರ್ವಾರ ಕೋಟೆಯಲ್ಲಿ ನಡೆದರೆ, ಆಲಿಯಾ ಮದುವೆ ಉದಯಪುರದ ದೊಡ್ಡ ಅರಮನೆಯಲ್ಲಿ ನಡೆಯಲಿದೆಯಂತೆ. ಅಷ್ಟೇ ಅಲ್ಲ, ಕತ್ರೀನಾ ಮತ್ತು ವಿಕ್ಕಿ ಇಬ್ಬರೂ ಸವ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಬಟ್ಟೆಗಳನ್ನು ತೊಟ್ಟರೆ, ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರುವ ಬಟ್ಟೆಗಳನ್ನು ರಣವೀರ್-ಆಲಿಯಾ ತೊಡುತ್ತಾರಂತೆ. ಇಷ್ಟೆಲ್ಲಾ ಮಾಹಿತಿಗಳನ್ನು ಕಲೆಹಾಕಿರುವ ಜನರಿಗೆ ಮದುವೆಗಳ ದಿನಾಂಕದ ಬಗ್ಗೆ ಮಾತ್ರ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ.

ಆದರೆ, ಈ ಜೋಡಿಗಳು ಮತ್ತು ಅವರ ಆಪ್ತರು ಮಾತ್ರ ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಪ್ರಮುಖವಾಗಿ ಕತ್ರೀನಾ ಕೈಫ್, ಈ ವಿಷಯದ ಬಗ್ಗೆ ಮಾತನಾಡಿ, ಮದುವೆಯಾಗುತ್ತಿರುವುದು ಸುಳ್ಳು ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕಳೆದ 15 ವರ್ಷಗಳಿಂದ ಇಂಥ ಸುದ್ದಿಗಳನ್ನೆಲ್ಲ ಸಾಕಷ್ಟು ಬಾರಿ ಕೇಳಿದ್ದು, ಇವೆಲ್ಲ ಸುಳ್ಳು ಎಂದಿದ್ದಾರೆ. ಇನ್ನು, ಆಲಿಯಾ ಪರವಾಗಿ ಅವರಮ್ಮ ಸೋನಿ ರಾಜ್ದಾನ್ ಮಾತನಾಡಿದ್ದು, ‘ಮದುವೆ ದಿನಾಂಕದ ಬಗ್ಗೆ ನನಗಂತೂ ಗೊತ್ತಿಲ್ಲ. ಹೆಚ್ಚಿನ ವಿಷಯವನ್ನು ಮಾಧ್ಯಮದವರೇ ನಮಗೆ ತಿಳಿಸಬೇಕು’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು, ರಣಬೀರ್ ದೊಡ್ಡಪ್ಪ ರಣಧೀರ್ ಮಾತನಾಡಿ, ಈ ವಿಷಯದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ.