ಬೆಂಗಳೂರು: ನಾಡಹಬ್ಬ ದಸರಾ ಆಚರಣೆ ಗುಂಗಿನಿಂದ ಈಗಷ್ಟೇ ಹೊರಬಂದಿದ್ದೇವೆ. ಈ ಮಧ್ಯೆ ದಸರಾ ಹಾಗೂ ಹುಲಿವೇಷ ಹಿನ್ನೆಲೆಯ ಸಿನಿಮಾ ‘ಮಾರ್ನಮಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟ ರಿತ್ವಿಕ್ ಮಠದ್, ಚೈತ್ರಾ ಜೆ.ಆಚಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ರಿಷಿತ್ ಶೆಟ್ಟಿ ಆ್ಯಕ್ಷನ್- ಕಟ್ ಹೇಳಿದ್ದಾರೆ. ಇತ್ತೀಚೆಗೆ ದಸರಾ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕ ಜಯರಾಮ್ ಶ್ರೀನಿವಾಸ್, ‘‘ಮಾರ್ನಮಿ’ ಕರಾವಳಿ ಭಾಗದ ಹುಲಿವೇಷ ಹಿನ್ನೆಲೆಯ ಕಥೆ. 1980ರ ದಶಕ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸ್ಟೋರಿ. ನಿರ್ದೇಶಕ ರಿಷಿತ್ ಶೆಟ್ಟಿ ಹುಲಿ ವೇಷ ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ತೋರಿಸಲು ಹೊರಟಿದ್ದಾರೆ. ಸದ್ಯ ಚಿತ್ರೀಕರಣ ಮುಗಿದಿದ್ದು, ವಿಎಫ್ಎಕ್ಸ್ ಸೇರಿ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ಬಿಜಿಯಾಗಿದೆ. ನವೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕ್ಲೈಮ್ಯಾಕ್ಸ್‌ನಲ್ಲಿಯೇ ಸುಮಾರು 3000ಕ್ಕೂ ಅಧಿಕ ಸಹ ಕಲಾವಿದರಿರುವುದು ವಿಶೇಷ. ಅಂದಾಜು 60-70 ದಿನಗಳ ಕಾಲ ಬಹುತೇಕ ಮಂಗಳೂರಿನಲ್ಲಿಯೇ ಶೂಟಿಂಗ್ ಮಾಡಿದ್ದೇವೆ. ನಾಯಕ ರಿತ್ವಿಕ್ ಈ ಪಾತ್ರಕ್ಕೆ ಸಾಕಷ್ಟು ಸಿದ್ಧತೆ ನಡೆಸಿದ್ದಾರೆ. ರಿತ್ವಿಕ್ ನೋಟವೇ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಸಿತು’ ಎಂದು ಮಾಹಿತಿ ಹಂಚಿಕೊಂಡರು. ಸದ್ಯದಲ್ಲೇ ಚಿತ್ರತಂಡ ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ. ರಿತ್ವಿಕ್, ಚೈತ್ರಾ ಜತೆ ಸೋನು ಗೌಡ, ಸುಮನ್ ತಲ್ವಾರ್, ಪ್ರಕಾಶ್ ತುಮ್ಮಿನಾಡು, ಸ್ವರಾಜ್ ಶೆಟ್ಟಿ, ಜ್ಯೋತಿಶ್ ಶೆಟ್ಟಿ ಕಲಾಬಳಗದಲ್ಲಿದ್ದಾರೆ. ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ, ಶಿವಸೇನ ಛಾಯಾಗ್ರಹಣ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.