ಸಿನಿವಾಣಿ

ಪರಭಾಷೆಗಳತ್ತ ಮಾನ್ವಿತಾ ಚಿತ್ತ ... ತೆಲುಗು ಮತ್ತು ತಮಿಳಿನಲ್ಲಿ ನಟಿಸುವ ಕುರಿತು ಮಾತುಕತೆ

ಮೊನ್ನೆಯಷ್ಟೇ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಮಾನ್ವಿತಾ ಕಾಮತ್, ಈ ಲಾಕ್‌ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ?

ಇಂಥದ್ದೊಂದು ಪ್ರಶ್ನೆಗೆ ಉತ್ತರಿಸುವ ಅವರು, ‘ಹೊಸ ರೊಟೀನ್ ಅಂತೇನಿಲ್ಲ. ಮನೆಯಲ್ಲೇ ಸಿನಿಮಾ, ವೆಬ್ ಸೀರೀಸ್ ನೋಡುತ್ತಿದ್ದೇನೆ. ಕಥೆ ಬರೆಯುತ್ತಿದ್ದೇನೆ. ಮನೆಯಲ್ಲಿದ್ದರೂ ಬ್ಯುಸಿಯಾಗಿದ್ದೇನೆ’ ಎಂದು ಹೇಳುತ್ತಾರೆ ಮಾನ್ವಿತಾ.

ಈಗಾಗಲೇ ‘ಶಿವ 143’ ಮತ್ತು ‘ರಾಜಸ್ಥಾನ್ ಡೈರೀಸ್’ ಚಿತ್ರಗಳಲ್ಲಿ ನಟಿಸಿ ಬಿಡುಗಡೆಗೆ ಎದುರು ನೋಡುತ್ತಿರುವ ಮಾನ್ವಿತಾ ಮುಂದಿರುವ ಯೋಜನೆಗಳೇನು ಎಂದರೆ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುವ ಯೋಚನೆ ಇದೆ ಎಂಬ ಉತ್ತರ ಅವರಿಂದ ಬರುತ್ತದೆ.

‘ಸದ್ಯಕ್ಕೆ ಕನ್ನಡದಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗಬೇಕಿದೆ. ಇನ್ನು ತೆಲುಗು ಮತ್ತು ತಮಿಳಿನಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ಯಾವುದೂ ಪಕ್ಕಾ ಆಗಿಲ್ಲ. ಈ ಲಾಕ್‌ಡೌನ್ ಮುಗಿದ ನಂತರ ಎಲ್ಲವೂ ಪಕ್ಕಾ ಆಗುವ ಸಾಧ್ಯತೆ ಇದೆ. ಆ ನಂತರವಷ್ಟೇ ಈ ವಿಷಯದ ಕುರಿತು ಏನಾದರೂ ಹೇಳಬಹುದು’ ಎನ್ನುತ್ತಾರೆ ಅವರು.