ಸಿನಿವಾಣಿ

ಮಾನ್ವಿತಾಗೆ ದಸರಾ ಕಳೆ : ಮೈಸೂರಿನಲ್ಲಿ ನವರಾತ್ರಿ ಆಚರಿಸುತ್ತಿರುವ ‘ಟಗರು’ ಪುಟ್ಟಿ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಈಗಾಗಲೇ ದೇಶ-ವಿದೇಶಗಳಿಂದ ಜನರು ಸಾಂಸ್ಕೃತಿಕ ನಗರದತ್ತ ಧಾವಿಸುತ್ತಿದ್ದಾರೆ. ಇದರಿಂದಾಗಿ ಅರಮನೆ ನಗರಿಯಲ್ಲಿ ಹಬ್ಬದ ಮೆರುಗು ಕಳೆಕಟ್ಟಿದೆ. ಇನ್ನು ಮೈಸೂರಿನಲ್ಲಿಯೇ ಇರುವವರಿಗೆ ಈ ಒಂಬತ್ತು ದಿನ ಹಬ್ಬದ ವೈಭವ ಕಣ್ತುಂಚಿಕೊಳ್ಳುವ ಸಂಭ್ರಮ. ‘ಟಗರು’ ಖ್ಯಾತಿಯ ನಟಿ ಮಾನ್ವಿತಾ ಕಾಮತ್, ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಜತೆ 2024ರ ಮೇ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಅವರು ಮೈಸೂರಿನಲ್ಲಿಯೇ ನೆಲೆಸಿದ್ದು, ಮದುವೆ ಬಳಿಕ ಅಲ್ಲಿಯೇ ಆಚರಿಸುತ್ತಿರುವ ಎರಡನೇ ವರ್ಷದ ದಸರಾ ಇದು. ಈ ಬಾರಿಯ ಹಬ್ಬದ ಸಡಗರ ಹೆಚ್ಚಿದ್ದು, ಆ ಬಗ್ಗೆ ನಟಿ ಮಾನ್ವಿತಾ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘ಚಿಕ್ಕವಳಿರುವಾಗ ಅಪ್ಪನ ಜತೆ ಬಂದು ಮೈಸೂರು ದಸರಾ ನೋಡಿದ್ದೆ. ಅಂದಿನಿಂದಲೂ ಅದು ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದಿದೆ. ಈಗ ನಾನು ಮದುವೆಯಾಗಿರುವ ಹುಡುಗ ಕೂಡ ಮೈಸೂರಿನವರು. ಸದ್ಯ ನಾವು ಇಲ್ಲೇ ನೆಲೆಸಿದ್ದೇವೆ. ಹೀಗಾಗಿ ಫೆಸ್ಟಿವ್ ವೈಬ್ ಹೆಚ್ಚಿದೆ. ಕಳೆದ ವರ್ಷ ಶ್ರೇಯಾ ಘೋಷಾಲ್ ಕಾರ್ಯಕ್ರಮದಲ್ಲಿ ಉದ್ಘಾಟಕಳಾಗಿ ಭಾಗವಹಿಸಿದ್ದೆ. ಮದುವೆಯಾದ ಬಳಿಕ ಇದು ಎರಡನೇ ದಸರಾ. ಕಳೆದ ವರ್ಷಕ್ಕಿಂತ ಈ ಬಾರಿ ಹಬ್ಬದ ಉತ್ಸಾಹ ಜಾಸ್ತಿಯಿದೆ. ಇನ್ನು ಮನೆಯಲ್ಲಿ ಕೂಡ ಹಬ್ಬ ಜೋರಿದ್ದು, ಕೊಂಕಣಿ ಸಂಪ್ರದಾಯದಂತೆ ಹಬ್ಬ ಆಚರಿಸುತ್ತೇವೆ. ಒಂಬತ್ತು ದಿನ ದೇವಿಯನ್ನು ಆರಾಧಿಸುತ್ತೇವೆ. ನೈವೇದ್ಯಕ್ಕೆ ಕೊಂಕಣಿ ಖಾದ್ಯಗಳನ್ನು ಮಾಡುವುದು ವಿಶೇಷ. ಶಿವರಾಮ್ ಪೇಟೆಯಲ್ಲಿ ಅರುಣ್ ಅವರ ದೇವಸ್ಥಾನವಿದೆ. ಅಲ್ಲಿಯೇ ದಿನ ನಾವು ಪೂಜೆ ಮಾಡುವುದು’ ಎಂದು ಹಬ್ಬದ ಬಗ್ಗೆ ಹಂಚಿಕೊಂಡರು.

ನವರಾತ್ರಿ ಎಂದರೆ ‘ದೇವಿ ಮಹಾತ್ಮೆ’: ‘ನವರಾತ್ರಿ ಎಂದರೆ, ನನಗೆ ನಮ್ಮೂರಿನಲ್ಲಿ ನಡೆಯುತ್ತಿದ್ದ ‘ದೇವಿ ಮಹಾತ್ಮೆ’ ಯಕ್ಷಗಾನ ನೆನಪಾಗುತ್ತದೆ. ಮೊದಲು ಅಸುರರಿಗೆ ಬದಲಾಗುವಂತೆ ದೇವಿ ಸೂಚಿಸುತ್ತಾಳೆ. ಆದರೂ, ಅವರು ಅರ್ಭಟ ಮುಂದುವರಿಸಿದಾಗ ಅವರನ್ನು ಸಂಹರಿಸುತ್ತಾಳೆ. ಅಂತೆಯೇ ಸಮಾಜದಲ್ಲಿ ತಪ್ಪು ಮಾಡುವವರಿಗೆ ಶಿಕ್ಷೆ ಗ್ಯಾರಂಟಿ. ಬದಲಾವಣೆಗೆ ಒಂದು ಅವಕಾಶವಿದೆ. ತಾಯಿ ದೇವಿಯನ್ನು ಆರಾಧಿಸುವ ಮೂಲಕ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಹಬ್ಬಗಳ ಆಚರಣೆಯಿಂದ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ’ ಎಂದು ಹಬ್ಬದ ಖುಷಿ ಹಂಚಿಕೊಂಡರು. ಇನ್ನು ಮಾನ್ವಿತಾ ಕಾಮತ್ ‘ಆ್ಯನಿಮೇಷನ್’ನಲ್ಲಿಯೇ ಪದವಿ ಪಡೆದಿರುವುದು. ಹೀಗಾಗಿ, ಆ್ಯನಿಮೇಷನ್ ಸಿನಿಮಾ ಮಾಡುವವರಿದ್ದು, ಅದಕ್ಕಾಗಿ ಪೂರ್ವತಯಾರಿ ನಡೆಸುತ್ತಿದ್ದಾರೆ. ಸದ್ಯದಲ್ಲಿಯೇ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುವ ಖುಷಿಯಲ್ಲಿದ್ದಾರೆ.