ಸಿನಿವಾಣಿ

ಮನಿಷಾ ಹೊಸ ಭರವಸೆ : ‘ಬ್ರ್ಯಾಟ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ನಟಿ

ಬೆಂಗಳೂರು: ನಿರ್ಮಾಪಕ ಮಂಜನಾಥ ಕಂದಕೂರ್ ಸಹೋದರ ಬದರೀನಾಥ್ ಪುತ್ರಿ ಮನಿಷಾ ಕಂದಕೂರ್ ‘ಬ್ರ್ಯಾಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಮನಿಷಾ ಈಗಾಗಲೇ ತೆಲುಗಿನ ‘ಭಲೆ ಉನ್ನಾಡೆ’ ಚಿತ್ರದಲ್ಲಿ ನಟಿಸಿರುವ ಅವರು ‘ಬ್ರ್ಯಾಟ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿದ್ದು, ಮೊದಲ ಕನ್ನಡ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ನಿರ್ದೇಶಕ ಶಶಾಂಕ್ ನಿರ್ದೇಶನದ ಈ ಚಿತ್ರವು ಇದೇ 31ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಕನ್ನಡ ಸಿನಿಮಾದ ಜರ್ನಿ ಬಗ್ಗೆ ನಟಿ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘ಸಿನಿಮಾಕ್ಕೆ ಬರುವ ಮುಂಚೆ ನಾನು ತುಂಬಾ ತಯಾರಿ ನಡೆಸಿದ್ದೇನೆ. ಬೆಂಗಳೂರಿನಲ್ಲಿ ಸಾಕಷ್ಟು ವರ್ಕ್‌ಶಾಪ್ ಮಾಡಿದ್ದೇನೆ. ಹಾಗೆಯೇ ಹೈದರಾಬಾದ್‌ನಲ್ಲಿ ಆ್ಯಕ್ಟಿಂಗ್‌ಗೆ ಸಂಬಂಧಿಸಿದಂತೆ ಕೋರ್ಸ್ ಕೂಡ ಮುಗಿಸಿದ್ದೇನೆ. ಈ ಎಲ್ಲದರ ಮಧ್ಯೆ, ನಾನು ಸಾಕಷ್ಟು ಸಿನಿಮಾಗಳನ್ನು ನೋಡುತ್ತೇನೆ. ಅಲ್ಲಿಂದಲೂ ಸಾಕಷ್ಟು ಕಲಿತಿದ್ದೇನೆ. ಕನ್ನಡಿ ಮುಂದೆ ಸಾಕಷ್ಟು ಬಾರಿ ನಟಿಸಿ, ನನ್ನ ನಟನೆಗೆ ಬಗ್ಗೆ ನಾನೇ ಪರಾಮರ್ಶಿಸಿಕೊಂಡಿದ್ದೇನೆ. ಇದು ನಾನು ತಯಾರಿ ನಡೆಸಿರುವ ರೀತಿ’ ಎಂದು ಖುಷಿಯಿಂದ ಮನಿಷಾ ಹಂಚಿಕೊಂಡರು.

ಸಿಂಪಲ್ ಗರ್ಲ್

‘ಬ್ರ್ಯಾಟ್’ ಮೂಲಕ ಮನಿಷಾ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. ಚಿತ್ರದ ಪಾತ್ರ ಹಾಗೂ ಅವಕಾಶ ಸಿಕ್ಕ ಬಗ್ಗೆ,‘ಕೃಷ್ಣ ಸರ್ ಹಾಗೂ ಶಶಾಂಕ್ ಸರ್ ಅವರ ಈ ಹಿಂದಿನ ಸಿನಿಮಾ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಆಡಿಷನ್ ನೀಡಿದ್ದೆ. ಆದರೆ, ಅಲ್ಲಿ ಸೆಲೆಕ್ಟ್ ಆಗಿರಲಿಲ್ಲ. ಆದರೆ, ಆ ವೇಳೆ ಶಶಾಂಕ್ ಸರ್ ಭರವಸೆ ನೀಡಿ, ಮುಂದಿನ ಚಿತ್ರಕ್ಕೆ ಅವಕಾಶ ಕೊಡುವೆ ಎಂದಿದ್ದರು. ಅಂತೆಯೇ ‘ಬ್ರ್ಯಾಟ್’ ಪಾತ್ರ ನನಗೆ ಒಪ್ಪುತ್ತದೆ ಎಂದು ಆಡಿಷನ್ ಮಾಡಿ ಅವಕಾಶ ಮಾಡಿದರು. ಇಲ್ಲೂ ಕೂಡ ನನ್ನ ಪಾತ್ರದ ಹೆಸರು ಮನಿಷಾ. ನನ್ನನ್ನು ನಾನೇ ನೋಡಿಕೊಳ್ಳುವಂತಹ ಸದಾವಕಾಶ ಪಾತ್ರದ ಮೂಲಕ ಸಿಕ್ಕಿದೆ. ಕಡಿಮೆ ಮಾತನಾಡುವ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿದ್ದೇನೆ. ಈ ಪಾತ್ರ ಎಲ್ಲ ವರ್ಗದವರಿಗೆ ಇಷ್ಟವಾಗುತ್ತದೆ ಎಂಬ ಭರವಸೆಯಿದೆ. ‘ನೀನೆ ನಾನಂತೆ’ ಸಾಂಗ್ ಮೂಲಕ ಹೆಚ್ಚು ತಯಾರಿ ನಡೆಸಿದ್ದೇವೆ. ಸ್ವಲ್ಪ ಕಷ್ಟ ಅನಿಸಿದರೂ, ಎಲ್ಲವನ್ನೂ ನಿರ್ವಹಿಸಿದ್ದೇನೆ ಎಂಬ ಭರವಸೆಯಿದೆ’ ಎಂದು ಹಂಚಿಕೊಂಡರು.

‘ದ ರಾಜಾಸಾಬ್’ನಲ್ಲಿ ಒಳ್ಳೆಯ ಪಾತ್ರ

ನಟಿ ಮನಿಷಾ, ಪ್ರಭಾಸ್ ನಟನೆಯ, ರಿಲೀಸ್‌ಗೆ ಸಿದ್ಧವಾಗಿರುವ ‘ದ ರಾಜಾಸಾಬ್’ ಚಿತ್ರದಲ್ಲಿದ್ದಾರೆ. ಆದರೆ, ಅಲ್ಲಿ ಕೂಡ ಒಳ್ಳೆಯ ಪಾತ್ರ ಎನ್ನುವ ಅವರು, ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುವಂತಿಲ್ಲ. ಇನ್ನು ‘ಬ್ರ್ಯಾಟ್’ ಬಳಿಕ ಕನ್ನಡ- ತೆಲುಗಿನಲ್ಲಿ ಒಳ್ಳೆಯ ಅವಕಾಶಗಳು ಬರಲಿವೆ ಎಂಬ ಅಶಾವಾದದಲ್ಲಿದ್ದೇನೆ’ ಎಂದು ಮನಿಷಾ ಹಂಚಿಕೊಳ್ಳುತ್ತಾರೆ.