ಸಿನಿವಾಣಿ

ಮಮತಾ ಮೋಹನ್​ ದಾಸ್​ಗೆ ವಿಟಿಲಿಗೊ; ಖಾಯಿಲೆಯ ಬಗ್ಗೆ ಹೇಳಿಕೊಂಡ ನಟಿ

ಚೆನ್ನೈ: ಕೆಲವೇ ತಿಂಗಳ ಹಿಂದಿನ ಮಾತು. ಸಮಂತಾ ನಿಗೂಢವಾಗಿ ಕಣ್ಮರೆಯಾಗಿದ್ದರು. ಅವರು ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದವರಿಗೆ ಅವರೇ ಒಂದು ದಿನ ಉತ್ತರ ಕೊಟ್ಟರು. ತಾವು ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು.

ಈಗ ಮತ್ತೊಬ್ಬ ನಟಿ, ತನಗಿರುವ ಕಾಯಿಲೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರೇ ಮಮತಾ ಮೋಹನ್​ ದಾಸ್​. ಮಲಯಾಳಂನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವುದರ ಜತೆಗೆ, ಕನ್ನಡದ 'ಗೂಳಿ' ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದ ಮಮತಾ, ಈಗಲೂ ಹಲವು ಚಿತ್ರಗಳಲ್ಲಿ ನಟಿಸುವುದರಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ, ಅವರು ತಮ್ಮ ಅನಾರೋಗ್ಯದ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಂಚಿಕೊಂಡಿರುವ ಅವರು, 'ನೆಚ್ಚಿನ ಸೂರ್ಯ, ನಾನು ಹಿಂದೆಂದಿಗಿಂತಲೂ ನಿನ್ನನ್ನು ಈಗ ಅಪ್ಪಿಕೊಳ್ಳಲು ಇಷ್ಟಪಡುತ್ತೇನೆ. ನಾನು ಬಣ್ಣ ಕಳೆದುಕೊಳ್ಳುತ್ತಿದ್ದೇನೆ. ನಿನ್ನ ಮೊದಲ ಕಿರಣಗಳನ್ನು ಆಸ್ವಾದಿಸಲು, ಪ್ರತಿದಿನ ನಿನಗಿಂತ ಮೊದಲು ನಾನೇ ಏಳುತ್ತಿದ್ದೇನೆ. ನಿನಗೆ ನಾನೆಂದಿಗೂ ಕೃತಜ್ಞಳಾಗಿರುತ್ತೇನೆ' ಎಂದು ಬರೆದುಕೊಳ್ಳುವುದರ ಜತೆಗೆ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಜತೆಗೆ ಆಟೋಇಮ್ಯೂನ್​ ಡಿಸೀಸ್​ (ಸ್ವಯಂನಿರೋಧಕ ಖಾಯಿಲೆ), ವಿಟಿಲಿಗೊ (ತೊನ್ನು) ಎಂದು ಹ್ಯಾಶ್​ಟ್ಯಾಗ್​ ಸೇರಿಸಿದ್ದಾರೆ. ಈ ಸಂಬಂಧ ಅವರು ಚಿಕಿತ್ಸೆ ಪಡೆಯುತ್ತಿದ್ದು, ಹಲವಾರು ಸ್ಟಾರ್​ ನಟ-ನಟಿಯರು ಮತ್ತು ಅಭಿಮಾನಿಗಳು ಅವರಿಗೆ ಬೇಗ ಗುಣಮುಖರಾಗಲು ಹಾರೈಸಿದ್ದಾರೆ.