ಕೇರಳ: ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್, ದಿಗ್ಗಜ ನಟ ಮಮ್ಮುಟ್ಟಿ ಮತ್ತು ಅವರ ಪುತ್ರ ದುಲ್ಕರ್ ಸಲ್ಮಾನ್ ಜೋಡಿಯ ಸ್ಪೆಷಾಲಿಟಿ ಬಹುತೇಕ ಸಿನಿಪ್ರಿಯರಿಗೆ ಗೊತ್ತೇ ಇದೆ. ರೋಚಕ ಕಥೆಗಳು, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಮಾಲಿವುಡ್ ಮಂದಿ ಮಾತ್ರವಲ್ಲದೇ, ಬೇರೆ ಭಾಷೆಯ ಸಿನಿಪ್ರಿಯರಿಗೂ ಚಿರಪರಿಚಿತರಾಗಿರುವ ಹಿರಿಯ ನಟನಿಗೆ ಇದೀಗ ಅವರ ಪುತ್ರನೇ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಕೊಡಲು ಸಜ್ಜಾಗಿರುವುದು ಸದ್ಯ ಕುತೂಹಲ ಕೆರಳಿಸಿದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನಡೆಯದ ಒಂದು ಅಪರೂಪದ ಘಟನೆ ಇದಾಗಲಿದೆ. ತಂದೆ ಮತ್ತು ಮಗ ಇಬ್ಬರೂ ಒಂದೇ ದಿನ, ಬೇರೆ ಬೇರೆ ಭಾಷೆಗಳ ಚಿತ್ರಗಳೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಫೇಸ್ ಟು ಫೇಸ್ ಆಗುತ್ತಿರುವುದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಅಷ್ಟಕ್ಕೂ ಒಂದೇ ದಿನ ರಿಲೀಸ್ ಆಗಲಿರುವ ಇಬ್ಬರು ಸ್ಟಾರ್ ಹೀರೋಗಳ ಸಿನಿಮಾ ಯಾವುದು ಎಂಬುದರ ವಿವರ ಹೀಗಿದೆ ನೋಡಿ.
ಲಕ್ಕಿ ಭಾಸ್ಕರ್ ಭರ್ಜರಿ ಸಕ್ಸಸ್ ಆದಾಗಿನಿಂದಲೂ ದುಲ್ಕರ್ ಸಲ್ಮಾನ್ ಟಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮಾಲಿವುಡ್ಗಿಂತ ತೆಲುಗಿನಲ್ಲೇ ಹೆಚ್ಚು ಚಿತ್ರಗಳನ್ನು ಮಾಡುತ್ತಿದ್ದಾರೆ. ಸದ್ಯ, ಪವನ್ ಸಾಧಿನಿ ನಿರ್ದೇಶನದ 'ಆಕಾಶಂಲೋ ಒಕ ತಾರಾ' (Aakashamlo Okta Tara) ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಹಾಜರಾಗಲು ರೆಡಿಯಾಗಿದ್ದಾರೆ. ತೆಲುಗಿನ ಪ್ರಮುಖ ನಿರ್ಮಾಣ ಸಂಸ್ಥೆಗಳಾದ ವೈಜಯಂತಿ ಮೂವೀಸ್ ಮತ್ತು ಗೀತಾ ಆರ್ಟ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಸಿನಿಮಾ ಇದೇ ನವೆಂಬರ್ 20ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಎಂಟ್ರಿಕೊಡಲಿದೆ.
ಮತ್ತೊಂದೆಡೆ, ಮಮ್ಮಟ್ಟಿ ಮತ್ತು ಧನುಷ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಓ.ಎಂ' (OM) ಕೂಡ ಇದೇ ನವೆಂಬರ್ 20ರಂದು ಬಿಡುಗಡೆಯಾಗಲಿದೆ. 'ಅಮರನ್' ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವು ಒಂದು ದೊಡ್ಡ ಗ್ಯಾಂಗ್‌ಸ್ಟರ್ ಆ್ಯಕ್ಷನ್ ಡ್ರಾಮಾ ಆಗಿದ್ದು, ಮಮ್ಮುಟ್ಟಿ ಅವರು ಪ್ರಮುಖ ಹಾಗೂ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ. ತಮಿಳು ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಈ ಚಿತ್ರೆ ತೆರೆಕಾಣಲು ಸಜ್ಜಾಗಿದೆ. ಹೀಗಾಗಿ, ಈ ಚಿತ್ರದ ಮೇಲೂ ಭಾರಿ ನಿರೀಕ್ಷೆಗಳು ಮೂಡಿವೆ.
ಒಂದೇ ದಿನ ತಂದೆ ಮತ್ತು ಮಗನ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುತ್ತಿರುವುದು ಸದ್ಯ ನಟರ ಅಭಿಮಾನಿಗಳಲ್ಲಿ ಭಾರಿ ಗೊಂದಲ ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಯಾರ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಮತ್ತು ಯಾರ ಚಿತ್ರಕ್ಕೆ ಸಿನಿಪ್ರಿಯರು ಫುಲ್ಮಾರ್ಕ್ಸ್ ಕೊಡಲಿದ್ದಾರೆ? ಇಬ್ಬರು ಸಖತ್ ಪೈಪೋಟಿ ಕೊಡುತ್ತಾರಾ? ಹೇಗಿರಲಿದೆ ಜಿದ್ದಾಜಿದ್ದಿ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).