ನಾಯಕಿಯ ಗೆಳತಿಯಾಗಿ, ನಾಯಕನ ತಂಗಿಯಾಗಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಕ್ರಮೇಣ ನಾಯಕಿಯಾದವರು ಮಲಯಾಳಂ ನಟಿ ಮಮಿತಾ ಬೈಜು. ‘ಕೃಷ್ಣಂ’, ‘ಸ್ಕೂಲ್ ಡೈರಿ’, ‘ಖೋ ಖೋ’, ‘ಸೂಪರ್ ಶರಣ್ಯಾ’ ಸೇರಿ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಅವರು ಕಳೆದ ವರ್ಷ ತೆರೆಕಂಡ ‘ಪ್ರೇಮಲು’ ಬಳಿಕ ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ +ನಟಿಯಾಗಿದ್ದಾರೆ. ಸದ್ಯ ಮಮಿತಾ ತಮಿಳು, ಮಲಯಾಳಂನ ಒಟ್ಟು ಏಳು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ದಳಪತಿ ಅಭಿನಯದ ‘ಜನನಾಯಗನ್’ನಲ್ಲಿ ಮಮಿತಾ ಅಭಿನಯಿಸಿದ್ದು, ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಜತೆಗೆ ಸೂರ್ಯ ಅಭಿನಯದ ಇನ್ನು ಹೆಸರಿಡದ 46ನೇ ಚಿತ್ರದ ಜತೆಗೆ ಪ್ರದೀಪ್ ರಂಗರಾಜನ್‌ಮ ‘ಡ್ಯೂಡ್’ ಹಾಗೂ ವಿಷ್ಣು ವಿಶಾಲ್‌ರ ‘ಇರಂದು ವಾನಮ್’ನಲ್ಲಿ ಮಮಿತಾ ನಟಿಸುತ್ತಿರುವುದು ಗೊತ್ತೆ ಇದೆ. ಇದೀಗ ಅವರ ಬಗ್ಗೆ ಮತ್ತೊಂದು ಅಪ್‌ಡೇಟ್ ದೊರೆತಿದ್ದು, ಧನುಷ್ ನಟನೆಯ 54ನೇ ಚಿತ್ರಕ್ಕೆ ಮಮಿತಾ ನಾಯಕಿಯಾಗಿದ್ದಾರೆ. ಈ ಮೂಲಕ ತಮಿಳಿನ ಖ್ಯಾತ ನಟರಾದ ವಿಜಯ್ ದಳಪತಿ, ಸೂರ್ಯ, ಧನುಷ್, ಪ್ರದೀಪ್ ರಂಗರಾಜನ್ ಜತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ. ಕಾಲಿವುಡ್ ಅಲ್ಲದೇ ಮಾಲಿವುಡ್‌ನಲ್ಲೂ ಕೂಡ ಮಮಿತಾ ಮಿಂಚುತ್ತಿದ್ದು, ‘ಪ್ರೇಮಲು-2’ ಚಿತ್ರದ ತಯಾರಿಯಲ್ಲಿದ್ದಾರೆ. ಹಾಗೆಯೇ ಇನ್ನೊಂದು ‘ಬೆಥ್ಲೆಯಿಂ ಕುಡುಬಂ ಯೂನಿಟ್’ನಲ್ಲಿ ನಟಿಸುತ್ತಿದ್ದು, ಈ ಮೂಲಕ ಮಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಭರವಸೆ ನಟಿಯಾಗಿ ಮಿಂಚುತ್ತಿದ್ದಾರೆ. -ಏಜೆನ್ಸೀಸ್