ಮುಂಬೈ: ನಟಿ ಮಲ್ಲಿಕಾ ಶೆರಾವತ್ ( Mallika Sherawat ) ಬಾಲಿವುಡ್‌ನಲ್ಲಿ ಗ್ಲಾಮರಸ್ ಪಾತ್ರಗಳಿಂದಲೇ ಗಮನ ಸೆಳೆದವರು. ಅದರಲ್ಲೂ ಮರ್ಡರ್ ಸಿನಿಮಾದಲ್ಲಿ ಬಿಕಿನಿ ಮತ್ತು ಕಿಸ್ಸಿಂಗ್ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದರು. ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರಿಂದ ಅನೇಕ ಜನರಿಂದ ಟೀಕೆಗೆ ಗುರಿಯಾಗಿದ್ದರು. ಇದಕ್ಕೆಲ್ಲ ಕ್ಯಾರೆ ಎನ್ನದೇ ನಟನೆ ಮುಂದುವರಿಸಿದ್ದರು. ಒಂದು ಕಾಲದಲ್ಲಿ ಸಖತ್ ಬಿಜಿಯಾಗಿದ್ದ ಮಲ್ಲಿಕಾ ಶೆರಾವತ್ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರು.
2017ರಲ್ಲಿ ಕೊನೆಯದಾಗಿ ಜೀನತ್ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಸುದೀರ್ಘ ಅಂತರ ಕಾಯ್ದುಕೊಂಡ ಮಲ್ಲಿಕಾ ಶೆರಾವತ್, 2022ರಲ್ಲಿ ಆರ್ಕೆ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡರು. ಅವಕಾಶಗಳ ಕೊರತೆಯಿಂದಾಗಿ ಮಲ್ಲಿಕಾ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಲ್ಲಿಕಾ, ತಮ್ಮ ಬೋಲ್ಡ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.
ತಾಜಾ ಸಂಗತಿ ಏನೆಂದರೆ, ಮಲ್ಲಿಕಾ ಶೆರಾವತ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೂಪರ್ ಹಿಟ್ ಚಿತ್ರವೊಂದರ ಶೂಟಿಂಗ್ ವೇಳೆ ದುಬೈ ಲೊಕೇಶನ್ನಲ್ಲಿ ತಮಗಾದ ಅನುಭವವನ್ನು ಮಲ್ಲಿಕಾ ತೆರೆದಿಟ್ಟಿದ್ದಾರೆ. ಚಿತ್ರದ ಶೂಟಿಂಗ್ ಹಿನ್ನೆಲೆಯಲ್ಲಿ ದುಬೈ ತೆರಳಿದ್ದೆವು. ಈ ವೇಳೆ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾಗ ಮಧ್ಯರಾತ್ರಿಯಲ್ಲಿ ಸ್ಟಾರ್ ಹೀರೋ ತನ್ನ ಕೋಣೆಯ ಬಾಗಿಲು ಬಡಿಯುತ್ತಿದ್ದ ಎಂದು ಮಲ್ಲಿಕಾ ಹೇಳಿದ್ದಾರೆ.
ರಾತ್ರಿ 12 ಗಂಟೆಗೆ ತುಂಬಾ ಜೋರಾಗಿ ಬಾಗಿಲು ಬಡಿದ ಶಬ್ಧ ಕೇಳಿತು. ಬಾಗಿಲು ಬಿದ್ದೇ ಹೋಗುತ್ತದೆ ಎಂದು ನಾನು ಹೆದರುತ್ತಿದ್ದೆ. ಆದರೆ, ನಾನು ಅವನ ಆಸೆಗೆ ಮಣಿಯಲಿಲ್ಲ. ಆ ನಂತರ ಆ ಪ್ರಾಜೆಕ್ಟ್‌ನಿಂದ ನನ್ನನ್ನು ಕೈಬಿಡಲಾಯಿತು ಎಂದು ಮಲ್ಲಿಕಾ ಹೇಳಿದ್ದಾರೆ. ಅಲ್ಲದೆ, ನಟರ ಬೇಡಿಕೆಗೆ ನಾನು ಮಣಿಯದ ಕಾರಣ ನನ್ನನ್ನು ಚಿತ್ರರಂಗದಿಂದ ದೂರ ಇಡಲಾಗಿದೆ ಎಂದು ನಟಿ ಆರೋಪಿಸಿದ್ದಾರೆ.
ಅಂದಹಾಗೆ ಮಲ್ಲಿಕಾ, 2003 ರಲ್ಲಿ ತೆರೆಕಂಡ 'ಖ್ವೈಶ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 2004ರಲ್ಲಿ ಬಿಡುಗಡೆಯಾದ 'ಮರ್ಡರ್' ಚಿತ್ರದ ಮೂಲಕ ಗಮನ ಸೆಳೆದರು. ಈ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಝೀ ಸಿನಿ ಪ್ರಶಸ್ತಿಯನ್ನು ಗೆದ್ದರು. ಬಾಕ್ಸ್ ಆಫೀಸ್ನಲ್ಲೂ ಈ ಸಿನಿಮಾ ದೊಡ್ಡ ಅಲೆ ಸೃಷ್ಟಿಸಿತು.
ಜಾಕಿಚಾನ್ ಅಭಿನಯದ ಹಾಲಿವುಡ್ ಚಿತ್ರ 'ಮಿಥ್' ನಲ್ಲೂ ಮಲ್ಲಿಕಾ ನಟಿಸಿದ್ದರು. 2006ರಲ್ಲಿ ತೆರೆಕಂಡ 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್' ಸಿನಿಮಾ ಹೆಚ್ಚು ಮೆಚ್ಚುಗೆ ಗಳಿಸಿತು. ಮಲ್ಲಿಕಾ ಕೊನೆಯದಾಗಿ 2022ರಲ್ಲಿ ಜಾಟ್ ಕಪೂರ್ ಅಭಿನಯದ ಆರ್ಕೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಮಲ್ಲಿಕಾ ಅವರ ಮುಂಬರುವ ಚಿತ್ರ "ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ", ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಮತ್ತು ತೃಪ್ತಿ ದಿಮ್ರಿ ನಟಿಸಿದ್ದಾರೆ. (ಏಜೆನ್ಸೀಸ್)