ಸಿನಿವಾಣಿ

ನಿಮ್ಮ ಕೈಕಾಲು ಕಟ್ಟಿ ರೂಮಿಗೆ ಹೊತ್ತೊಯ್ದರಾ? ನಾನು ಪುರುಷರನ್ನು ಬೆಂಬಲಿಸ್ತೀನಿ ಎಂದ ಖ್ಯಾತ ನಟಿ! Priyanka Anoop

ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ, ಕೇರಳ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಭಾರಿ ಸಂಚಲನ ಮೂಡಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸ್ಟಾರ್ ನಟಿಯರು ಕೂಡ ಚಿತ್ರರಂಗದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಇದೀಗ ಆರೋಪ ಮಾಡಿದ ನಟಿಯರ ವಿರುದ್ಧವೇ ಮತ್ತೊಬ್ಬ ನಟಿ ಮಾತನಾಡಿದ್ದು, ಕೇರಳ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಿರುತೆರೆ ಹಾಗೂ ಬೆಳ್ಳಿತೆರೆ ಮೂಲಕ ಮಲಯಾಳಂ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿರುವ ನಟಿ ಪ್ರಿಯಾಂಕಾ ಅನೂಪ್ ( Priyanka Anoop ) , ‘ಪರಿಭವ ಪಾರ್ವತಿ’ ಎಂಬ ಹಿಟ್ ಸೀರೀಸ್ ಮೂಲಕ ಜನಪ್ರಿಯರಾದರು. ಇದೀಗ ಪ್ರಿಯಾಂಕಾ ಅವರು ಚಿತ್ರರಂಗದಲ್ಲಿನ ಸಮಸ್ಯೆಗಳು ಮತ್ತು ಹೊಂದಾಣಿಕೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾದಲ್ಲಷ್ಟೇ ಅಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಈ ಹೊಂದಾಣಿಕೆ ಇದೆ ಎನ್ನುತ್ತಾರೆ ಪ್ರಿಯಾಂಕಾ. ಕೇರಳದ ಕೌಮುದಿ ಮೂವೀಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಕೆಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ನಿಜವಾಗಿಯೂ ಸಿನಿಮಾರಂಗದಲ್ಲಿ ಹೊಂದಾಣಿಕೆ ಅನ್ನೋದೆ ಇಲ್ಲ. ಅದು ವೈಯಕ್ತಿಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಆದ್ಯತೆಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಮೊದಲು ಹೊಂದಾಣಿಕೆ ಅಂದರೆ ಏನು ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು. ಯಾರಾದರೂ ಹೊಂದಾಣಿಕೆ ಮಾಡಿಕೊಳ್ಳಿ ಅಂತ ಕೇಳಿದರೆ, ನಾನು ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಏನೆಂದರೆ, ಆ ಚಿತ್ರವೇ ಬೇಡ. ಈ ಹೊಂದಾಣಿಕೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಹೋಗಲಿಚ್ಛಿಸುವವರು ಹೋಗುತ್ತಾರೆ. ಏಕೆಂದರೆ, ಅದು ಅವರ ಇಷ್ಟ ಎಂದು ಪ್ರಿಯಾಂಕಾ ಹೇಳಿದರು.

ಇಲ್ಲಿ ಬಲವಂತ ಅನ್ನೋದು ಇಲ್ಲ. ಯಾರನ್ನೂ ಬಲವಂತ ಮಾಡಿಲ್ಲ. ಯಾರನ್ನೂ ಕೈಕಾಲು ಕಟ್ಟಿ ಬಲವಂತವಾಗಿ ಕೋಣೆಗೆ ಕರೆದುಕೊಂಡು ಹೋಗುವುದಿಲ್ಲ. ಇಲ್ಲಿರುವುದು ನಿಮ್ಮ ಸ್ವಂತ ಆಯ್ಕೆಯಷ್ಟೇ. ಹೀಗಿರುವಾಗ ಒಬ್ಬ ವ್ಯಕ್ತಿಯನ್ನು ಏಕೆ ದೂಷಿಸಬೇಕು. ಈ ವಿಚಾರದಲ್ಲಿ ನಾನು ಪುರುಷರನ್ನು ಬೆಂಬಲಿಸುತ್ತೇನೆ. ಪ್ರತಿ ಸಂದರ್ಶನದಲ್ಲಿಯೂ ನಾನು ಪುರುಷರನ್ನು ಬೆಂಬಲಿಸುತ್ತಾ ಬಂದಿದ್ದೇನೆ ಎಂದು ಪ್ರಿಯಾಂಕಾ ಹೇಳಿದರು.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)