Malaika Arora : ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 1998 ರಲ್ಲಿ ನಟ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಇದಕ್ಕೆ ಸಾಕ್ಷಿಯಾಗಿ 2002 ರಲ್ಲಿ ಅರ್ಹಾನ್ ಖಾನ್ ಜನಿಸಿದನು. ಆರಂಭದಲ್ಲಿ ಉತ್ತಮ ಸಂಬಂಧ ಹೊಂದಿದ್ದ ದಂಪತಿ ನಂತರ ವೈಮಸ್ಸಿನಿಂದಾಗಿ ಬೇರೆಯಾಗಲು ಪ್ರಾರಂಭಿಸಿದರು. ಅಂತಿಮವಾಗಿ 2017ರಲ್ಲಿ ಅವರು ವಿಚ್ಛೇದನ ಪಡೆದರು. ಆದಾಗ್ಯೂ, ಇಬ್ಬರೂ ಮಗುವಿನ ಜವಾಬ್ದಾರಿಯನ್ನು ವಹಿಸಿಕೊಂಡರು.
ಇದಾದ ನಂತರ, ಮಲೈಕಾ ಅವರು ನಟ ಅರ್ಜುನ್ ಕಪೂರ್ ಪ್ರೀತಿಯಲ್ಲಿ ಬಿದ್ದರು. ಅವರಿಬ್ಬರ ಸಂಬಂಧ ವರ್ಷಗಳ ಕಾಲ ಇತ್ತು. ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಜೋರಾಗಿತ್ತು. ಆದರೆ, ಅವರಿಬ್ಬರು ತಮ್ಮ ಪ್ರೇಮ ಪ್ರಯಾಣಕ್ಕೆ ದಿಢೀರ್ ಪೂರ್ಣವಿರಾಮ ಹಾಕಿ, ಬೇರೆಯಾಗುತ್ತಿರುವುದನ್ನು ಘೋಷಿಸಿದರು.
ಇತ್ತೀಚೆಗೆ, ಮಲೈಕಾ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಜೀವನ ಹಾಗೂ ಸಹ-ಪೋಷಕತ್ವದ ಬಗ್ಗೆ ಮಾತನಾಡಿದ್ದಾರೆ. ನಾವು ಗಂಡ ಮತ್ತು ಹೆಂಡತಿಯಾಗಿ ಬೇರ್ಪಟ್ಟಿದ್ದರೂ, ನಾವು ನಮ್ಮ ಮಗುವಿಗೆ ಪೋಷಕರಾಗಿದ್ದೇವೆ. ಈಗ ಅವನಿಗೆ 22 ವರ್ಷ. ಅವನಿಗೆ ತಾಯಿಯೊಂದಿಗೆ ಏನು ಮಾತನಾಡಬೇಕು? ತಂದೆಯೊಂದಿಗೆ ಹೇಗೆ ಇರಬೇಕು? ಎಂಬುದು ಚೆನ್ನಾಗಿ ತಿಳಿದಿದೆ ಎಂದರು.
ಜೀವನದಲ್ಲಿ ನಾವು ಬಯಸಿದ್ದೆಲ್ಲವೂ ನಡೆಯುವುದಿಲ್ಲ. ನಮ್ಮ ವಿಚ್ಛೇದನ ನಮ್ಮ ಮಗನ ಮೇಲೆ ಪರಿಣಾಮ ಬೀರುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ನಾವಿಬ್ಬರೂ ಜವಾಬ್ದಾರಿಯನ್ನು ತೆಗೆದುಕೊಂಡೆವು. ಆದರೆ, ವಿಚ್ಛೇದನ ಘೋಷಿಸಿದಾಗ, ಹೆಚ್ಚಿನ ಜನರು ಹೀಗೂ ಮಾಡುತ್ತಾರಾ? ಡಿವೋರ್ಸ್ ಕೊಡಬಾರದಿತ್ತು ಎಂದು ನನಗೆ ನೈತಿಕತೆ ಪಾಠ ಮಾಡಿದರು. ಆದರೆ, ನಾನು ಹೇಳುವುದೇನೆಂದರೆ, ಕೆಲವೊಮ್ಮೆ ಸಂಬಂಧಗಳು ಜಟಿಲವಾಗಿರುತ್ತವೆ. ನನ್ನ ವೈವಾಹಿಕ ಸಂಬಂಧ ಮುಂದುವರಿಯಬೇಕೆಂದು ನಾನು ಬಯಸಿದ್ದೆ. ಆದರೆ, ಅದು ಆಗಲಿಲ್ಲ. ಹೀಗಿರುವಾಗ ನಾನೇನು ಮಾಡಲಿ ಎಂದು ಮಲೈಕಾ ಹೇಳಿದರು.
ಪ್ರೀತಿ ವಿಚಾರವಾಗಿ ಮಾತನಾಡಿದ ಅವರು ನಾನು ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡೆ ಅಂತ ಅರ್ಥವಲ್ಲ. ನಾನು ಏನೋ ದೊಡ್ಡ ತಪ್ಪು ಮಾಡಿದೆ ಅಂತನೂ ಅರ್ಥವಲ್ಲ. ಎಲ್ಲರೂ ನನ್ನ ವಿರುದ್ಧ ಬೆರಳು ತೋರಿಸುತ್ತಾ, ಇದೆಲ್ಲಾ ನನ್ನ ತಪ್ಪು ಅಂತ ಹೇಳಿದರು. ನಾನು ಸ್ವಾರ್ಥಿ ಅಂತ ಹೇಳಿದರು. ನಿಮಗೂ ಹಾಗೆಯೇ ಅನಿಸಬಹುದು. ಆದರೆ, ನಾನು ನನ್ನಷ್ಟಕ್ಕೆ ಸಂತೋಷವಾಗಿರಲು ಬಯಸಿದ್ದೆ. ಅದಕ್ಕಾಗಿಯೇ ನಾನು ಆ ಸಂಬಂಧದಿಂದ ಹೊರಬಂದೆ. ನಾನೀಗ ಸಂತೋಷವಾಗಿದ್ದೇನೆ. ಸಂತೋಷ ಹುಡುಕುವುದರಲ್ಲಿ ತಪ್ಪೇನು ಎಂದರು.
ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಅಮ್ಮ ದಿನವಿಡೀ ಕೆಲಸದಲ್ಲಿ ನಿರತರಾಗಿದ್ದರು. ನಮಗಾಗಿ ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದರು. ಅವರು ತಮ್ಮಲ್ಲಿದ್ದ ವಸ್ತುಗಳನ್ನು ಮಾರಿ ಶಾಲಾ ಶುಲ್ಕವನ್ನು ಪಾವತಿಸುತ್ತಿದ್ದರು. ಹಣದ ಮೌಲ್ಯ ನನಗೆ ಚೆನ್ನಾಗಿ ತಿಳಿದಿತ್ತು. ಆಗ ನಾನೇ ನನ್ನ ತಂಗಿಯನ್ನು ನೋಡಿಕೊಳ್ಳುತ್ತಿದ್ದೆ. ನಾನು 17ನೇ ವಯಸ್ಸಿನಲ್ಲಿ ಕುಟುಂಬಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಹಣ ಸಂಪಾದಿಸುವುದು ನನ್ನ ಗುರಿಯಾಗಿತ್ತು. ನಾನು ಸ್ನೇಹಿತರೊಂದಿಗೆ ಪಾರ್ಟಿಗಳಿಗೆ ಹೋಗುತ್ತಿರಲಿಲ್ಲ. ಹಣದ ವಿಷಯಕ್ಕೆ ಬಂದಾಗ ನಾನು ಇನ್ನೂ ಹಾಗೆಯೇ ಇದ್ದೇನೆ. ನಾನು ಪ್ರತಿಯೊಂದು ಖರ್ಚನ್ನು ಪುಸ್ತಕದಲ್ಲಿ ಬರೆಯುತ್ತೇನೆ. ನನಗೆ ದುಬಾರಿ ವಸ್ತುಗಳನ್ನು ಖರೀದಿಸಲು ಇಷ್ಟವಿಲ್ಲ ಎಂದು ಮಲೈಕಾ ಹೇಳಿದರು. (ಏಜೆನ್ಸೀಸ್)