ಚಿತ್ರರಂಗದ ಸದ್ಯದ ಸ್ಥಿತಿಗತಿ ಅತಂತ್ರವಾಗಿದೆ. ಬಿಡುಗಡೆ ಆಗಬೇಕಿರುವ ಸಿನಿಮಾಗಳ ಪಟ್ಟಿ ದೊಡ್ಡದಿದೆಯಾದರೂ, ಅವೆಲ್ಲವೂ ಚಿತ್ರಮಂದಿರಕ್ಕೆ ಬರಬೇಕೆಂದರೆ, ಏನಿಲ್ಲ ಅಂದರೂ ನಾಲ್ಕೈದು ತಿಂಗಳುಗಳೇ ಬೇಕು. ಹೀಗಿರುವಾಗ ಒಂದಷ್ಟು ಮಂದಿ ಓಟಿಟಿ ಮೊರೆ ಹೋಗುತ್ತಿದ್ದಾರೆ. ನೇರವಾಗಿ ಆನ್ಲೈನ್ನಲ್ಲಿ ಬಿಡುಗಡೆ ಆಗುತ್ತಿವೆ. ಈಗ ಆ ಸಿನಿಮಾಗಳ ಸಾಲಿಗೆ ಬಾಲಿವುಡ್ನ ಬಿಗ್ ಬಜೆಟ್ನ ‘83’ ಚಿತ್ರ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ!
ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ 10ರಂದು ಕಬೀರ್ ಖಾನ್ ನಿರ್ದೇಶನದ 83 ಸಿನಿಮಾ ಬಿಡುಗಡೆ ಆಗಿರುತ್ತಿತ್ತು. ಆದರೆ, ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಹೀಗಿರುವಾಗಲೇ ಇದೇ ಸಿನಿಮಾ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲಿದೆಯಂತೆ. 143 ಕೋಟಿಗೆ ರೂ ಮೊತ್ತಕ್ಕೆ ಸಿನಿಮಾ ಖರೀದಿಸುವುದಾಗಿ ಪ್ರತಿಷ್ಠಿತ ಓಟಿಟಿ ಸಂಸ್ಥೆಯೊಂದು ಹೇಳಿಕೊಂಡಿದೆ.
ಹಾಗಾದರೆ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆಯೇ? ಸದ್ಯಕ್ಕೆ ಆ ಬಗ್ಗೆ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿರುವ ರಿಲಯನ್ಸ್ ಎಂಟರ್ಟೈನ್ಮೆಂಟ್ ಮಾಹಿತಿ ನೀಡಿದೆ. 83 ಸಿನಿಮಾ ಹಿರಿ ಪರದೆಯಲ್ಲಿಯೇ ಬಿಡುಗಡೆ ಆಗಲಿದೆ. ಯಾವುದೇ ಕಾರಣಕ್ಕೂ ಓಟಿಟಿಗೆ ಬರುವುದಿಲ್ಲ ಎಂದಿದೆ. ಅಂದಹಾಗೆ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆ ನಿಭಾಯಿಸಿರುವ ಈ ಸಿನಿಮಾಕ್ಕೆ ಸ್ವತಃ ದೀಪಿಕಾ ಹಣ ಹೂಡಿದ್ದಾರೆ. (ಏಜೆನ್ಸೀಸ್)