ಸಿನಿವಾಣಿ

ಮಜಾಭಾರತ ಮತ್ತೆ ಶುರು: ನವೆಂಬರ್ 7ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ

ಬೆಂಗಳೂರು: ನಗುವೇ ಎಲ್ಲ ನೋವುಗಳಿಗೂ ದಿವ್ಯ ಔಷಧಿ. ಅಂಥ ನಗುವನ್ನು ಯಾವ ಮಾಸ್ಕೂ ಮರೆ ಮಾಡಲಾಗದು. ಇದೇ ನಂಬಿಕೆಯೊಂದಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನ ಮೆಚ್ಚಿದ ಕಾಮಿಡಿ ಶೋ ‘ಮಜಾಭಾರತ’ ಮತ್ತೆ ಪ್ರಾರಂಭವಾಗಲಿದೆ.

ನಾಳೆ (ನವೆಂಬರ್ 7) ಹೊಸ ಸೀಸನ್ ಪ್ರಾರಂಭವಾಗಲಿದ್ದು, ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಹೊಸ ಸಂಚಿಕೆಗಳು ಪ್ರಸಾರವಾಗಲಿದೆ. ಮನೆಮಂದಿಯನ್ನೆಲ್ಲಾ ನಗಿಸಿಯೇ ತೀರುವ ಉತ್ಸಾಹದಲ್ಲಿರುವ ‘ಮಜಾಭಾರತ’ ತಂಡವು, ಹೊಸ ಸ್ಕಿಟ್​ಗಳ ಜತೆಗೆ ಕೆಲವು ಹೊಸ ಆಕರ್ಷಣೆಗಳನ್ನೂ ಸೇರಿಸಿಕೊಂಡಿವೆ. ಪ್ರಮುಖವಾಗಿ ಇಬ್ಬರು ಹೊಸ ಅತಿಥಿಗಳು ಸೇರ್ಪಡೆಯಾಗಿರುವುದು ಈ ಸೀಸನ್ನಿನ ವಿಶೇಷ. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಮನೆಮಾತಾದ ಭೂಮಿ ಶೆಟ್ಟಿ, ಇಲ್ಲಿ ನಿರೂಪಕಿಯಾಗಿ ರಂಜಿಸಲಿದ್ದಾರೆ.

ಇನ್ನು ಅದೇ ಮನೆಯಲ್ಲಿ ವಿವಿಧ ಪಾತ್ರಗಳಿಂದ ಎಲ್ಲರನ್ನೂ ನಗಿಸಿದ್ದ ಹರೀಶ್ ರಾಜ್ ಅಲಿಯಾಸ್ ಶೇಷಪ್ಪ, ಈ ಬಾರಿ ಪ್ರತಿ ವಾರವೂ ಒಂದು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ‘ಮಜಾಭಾರತ’ದ ಪ್ರಮುಖ ಆಕರ್ಷಣೆಗಳೆಂದರೆ ಅದು ರಚಿತಾ ರಾಮ್ ಅವರ ನಗು ಮತ್ತು ಗುರುಕಿರಣ್ ಅವರ ಮಾತು. ಈ ಸೀಸನ್​ನಲ್ಲೂ ಅವೆರೆಡೂ ಮುಂದುವರೆಯಲಿದ್ದು, ಮಾತಿನ ಜತೆಗೆ ಗುರುಕಿರಣ್ ಈ ಬಾರಿ ಹೊಸ ಸರ್​ಪ್ರೖೆಸ್ ಹೊತ್ತು ತರುತ್ತಿದ್ದಾರೆ. ಅದೇನೆಂದು ಕಾರ್ಯಕ್ರಮದಲ್ಲೇ ನೋಡಬೇಕು. ಒಟ್ಟಾರೆ, ಈ ಬಾರಿಯ ‘ಮಜಾಭಾರತ’ದ ಹೊಸ ಸೀಸನ್ ಹಲವು ಹೊಸತನಗಳೊಂದಿಗೆ ಬರುತ್ತಿದ್ದು, ಏನೆಲ್ಲ ಹೊಸತನ ಎಂಬ ಕುತೂಹಲ ತಣಿಯಲು ಶನಿವಾರ ರಾತ್ರಿ ಒಂಬತ್ತಕ್ಕೆ ಕಲರ್ಸ್ ಕನ್ನಡ ನೋಡಲು ಮರೆಯದಿರಿ.